ಸಂತ ಲಾರೆನ್ಸರ ರಕ್ತಸಾಕ್ಷಿತ್ವ ರಚಿಸಿದವರು: Lawrence OP, ಪರವಾನಗಿ CC BY-NC-ND 2.0.
ಮಾನವ ಯಾತನೆಯು ಜೀವನದ ಅತ್ಯಂತ ಮಹತ್ತರ ರಹಸ್ಯಗಳಲ್ಲಿ ಒಂದು. ಸಂತ ಫೌಸ್ತೀನಾರ ದಿನಚರಿಯೂ ನಮ್ಮ ವಿಶ್ವಾಸದ ಸಮಸ್ತ ಆಧ್ಯಾತ್ಮಿಕ ಪರಂಪರೆಯೂ ಯಾತನೆಯ ಈ ಗಹನ ರಹಸ್ಯದ ಕುರಿತು ಅನೇಕ ಸಂಗತಿಗಳನ್ನು ತಿಳಿಸುತ್ತವೆ. ಮೊದಲನೆಯದಾಗಿ, ಕೇವಲ ಲೌಕಿಕ ದೃಷ್ಟಿಕೋನದಿಂದ ನೋಡಿದಾಗ, ಯಾತನೆಯು ಯಾರೂ ಬಯಸುವಂಥದ್ದಲ್ಲ. ವಾಸ್ತವವಾಗಿ, ಸಾಮಾನ್ಯವಾಗಿ ಅದನ್ನು ಏನೇ ಬೆಲೆ ತೆತ್ತಾದರೂ ತಪ್ಪಿಸಲಾಗುತ್ತದೆ ಮತ್ತು ಅತ್ಯಂತ ದೊಡ್ಡ ದುರಂತವೆಂದು ಕಾಣಲಾಗುತ್ತದೆ. ಆದರೆ, ಕ್ರೈಸ್ತ ದೃಷ್ಟಿಕೋನದಿಂದ ನೋಡಿದಾಗ, ಕ್ರಿಸ್ತರು ಯಾತನೆಯನ್ನೇ ಪರಿವರ್ತಿಸಿ, ಇದುವರೆಗೆ ತಿಳಿದಿರುವ ಅನುಗ್ರಹದ ಅತ್ಯಂತ ಮಹತ್ತರ ಸಾಧನವನ್ನಾಗಿ ಮಾಡಿದ್ದಾರೆ. ಶಿಲುಬೆಯ ಮೇಲೆ ಅವರು ಅನುಭವಿಸಿದ ತೀವ್ರ ಯಾತನೆಯ ಮೂಲಕವೇ ಲೋಕದ ರಕ್ಷಣೆ ನೆರವೇರಿತು. ಎಲ್ಲ ಯಾತನೆಯನ್ನೂ ಸ್ವತಂತ್ರವಾಗಿ ಸ್ವೀಕರಿಸುವ ಮೂಲಕ, ಅವರು ಅದನ್ನು ಸಕಲ ಅನುಗ್ರಹದ ಸಾಧನವಾಗಿಯೂ ಮೂಲವಾಗಿಯೂ ಮಾಡಿದರು. ಹೀಗೆ ಮಾಡುವ ಮೂಲಕ, ನಮ್ಮ ಯಾತನೆಗಳನ್ನು ಅನುಗ್ರಹದ ಅವಕಾಶವಾಗಿ ಕಾಣುವಂತೆ ಯೇಸು ನಮ್ಮನ್ನೂ ಆಹ್ವಾನಿಸುತ್ತಾರೆ. ನಮ್ಮ ಯಾತನೆಯನ್ನು ಸ್ವೀಕರಿಸಿ, ಅದನ್ನು ಅವರ ಶಿಲುಬೆಯೊಂದಿಗೆ ಒಗ್ಗೂಡಿಸಿ, ಪಿತನಿಗೆ ಅರ್ಪಿಸುವ ಮೂಲಕ, ನಮ್ಮ ಯಾತನೆಯೂ ಅನಂತ ಮೌಲ್ಯವನ್ನು ಪಡೆದು ದೇವರ ಕರುಣೆಯು ಹರಿಯುವ ಮಾರ್ಗವಾಗಬಲ್ಲದು. ಕ್ರೈಸ್ತರು ಸ್ವತಂತ್ರವಾಗಿ ಸ್ವೀಕರಿಸುವ ಯಾತನೆಯು, ಅವರು ಕ್ರಿಸ್ತರಿಗೆ ಆಪ್ತರಾಗಿರುವುದರ ಸಂಕೇತವೂ ಪವಿತ್ರತೆಯತ್ತ ಸಾಗುವ ಹಾದಿಯೂ ಆಗಬೇಕು (ನೋಡಿ ದಿನಚರಿ #774).
ಯಾತನೆಯು ಬಹಳ ಕಠಿಣವಾಗಿರಬಹುದು; ಆದರೂ ಜೀವನದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಅದನ್ನು ತಪ್ಪಿಸಲಾಗುವುದಿಲ್ಲ. ಅದರಿಂದ ಓಡಿಹೋಗುವ ಬದಲು, ದೇವರು ನಿಮ್ಮ ಯಾತನೆಯನ್ನು ಒಳಿತಿಗಾಗಿ ಬಳಸಬಲ್ಲರು ಎಂಬುದನ್ನು ಇಂದು ಧ್ಯಾನಿಸಿ. ಇದು ಒಂದು ನಿಗೂಢ ಕರೆ; ಇದಕ್ಕೆ ಅತ್ಯಂತ ದೃಢವಾದ ವಿಶ್ವಾಸ ಮತ್ತು ಭರವಸೆ ಬೇಕಾಗುತ್ತದೆ. ಆದರೆ ಈ ಕರೆಯನ್ನು ಸ್ವೀಕರಿಸಿದಾಗ, ದೇವರ ಶಕ್ತಿಯು ಜೀವನದಲ್ಲಿ ಅತ್ಯಂತ ನೋವುಂಟುಮಾಡುವ ಸಂಗತಿಗಳನ್ನೂ ಆವರಿಸಿ ಪರಿವರ್ತಿಸುತ್ತದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ.
ಪ್ರಭುವೇ, ನನ್ನ ಎಲ್ಲ ಯಾತನೆಯನ್ನು ನಿಮಗೆ ಒಪ್ಪಿಸಿಕೊಡಲು ನನಗೆ ಸಹಾಯಮಾಡಿ. ಜೀವನದ ಅತ್ಯಂತ ಸಂಕಷ್ಟದ ಸಮಯಗಳಲ್ಲಿ ನಿಮ್ಮಲ್ಲಿ ನಿರೀಕ್ಷೆಯಿಟ್ಟು, ನಿಮ್ಮ ಶಿಲುಬೆಯ ಮೇಲೆಯೇ ನನ್ನ ದೃಷ್ಟಿಯನ್ನು ನೆಲೆಗೊಳಿಸಲು ನನಗೆ ಸಹಾಯಮಾಡಿ. ಪ್ರಭುವೇ, ನನ್ನನ್ನು ಬಳಸಿಕೊಳ್ಳಿ; ನನ್ನ ಯಾತನೆಯನ್ನು ನನ್ನ ಪವಿತ್ರತೆಯ ಮೂಲವಾಗಿಯೂ ನಿಮ್ಮ ಧರ್ಮಸಭೆಯು ಪವಿತ್ರತೆಯಲ್ಲಿ ಬೆಳೆಯುವುದಕ್ಕಾಗಿಯೂ ಬಳಸಿಕೊಳ್ಳಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ಜೂನ್ 1 –ರಕ್ತಸಾಕ್ಷಿ ಸಂತ ಜಸ್ಟಿನರ ಸ್ಮರಣೆ
ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು
ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು




