ಕನ್ನಡ

ಚಿಂತನೆ 236: ಎಲ್ಲರಿಗೂ ಕರುಣೆ ದೊರೆಯಲೆಂದು ಪ್ರಾರ್ಥಿಸುವುದು

ರೋಗಿಗಳನ್ನು ಗುಣಪಡಿಸುತ್ತಿರುವ ಕ್ರಿಸ್ತ, ವಾಷಿಂಗ್ಟನ್ ಆಲ್ಸ್ಟನ್ ಅವರ ಕೃತಿ

ವೀಡಿಯೊ

ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯರು; ನಮ್ಮ ನಿರ್ದಿಷ್ಟ ಅಗತ್ಯಗಳಿಗೆ ಅನುಸಾರವಾಗಿ ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ತನ್ನ ಕರುಣೆಯನ್ನು ಹೇರಳವಾಗಿ ಸುರಿಸಲು ದೇವರು ಬಯಸುತ್ತಾರೆ.  ನಾವು ಜನರಿಗಾಗಿ ಪ್ರಾರ್ಥಿಸುವಾಗ, ಅವರನ್ನು ಒಬ್ಬೊಬ್ಬರಾಗಿಯೂ ಗುಂಪುಗಳಾಗಿಯೂ ದೇವರಿಗೆ ಅರ್ಪಿಸುವುದು ಒಳ್ಳೆಯದು.  ನಾವು ಪ್ರಾರ್ಥಿಸಬೇಕಾದ ಜನರ ಕೆಲವು ಗುಂಪುಗಳು ಇಲ್ಲಿವೆ: ಎಲ್ಲ ಪಾಪಿಗಳು, ಯಾಜಕರು, ಸನ್ಯಾಸಿಗಳು ಮತ್ತು ಸನ್ಯಾಸಿನಿಯರು, ವಿಶ್ವಾಸಿಗಳು, ಅನ್ಯದೇವತೆಗಳ ಆರಾಧಕರು, ನಾಸ್ತಿಕರು, ಪಾಷಂಡಿಗಳು, ಸಭಾಭೇದಿಗಳು, ಮಕ್ಕಳು, ಕರುಣೆಯ ಭಕ್ತರು, ಶುದ್ಧಿಸ್ಥಳದಲ್ಲಿರುವವರು ಮತ್ತು ಆಧ್ಯಾತ್ಮಿಕವಾಗಿ ಉತ್ಸಾಹಹೀನರಾದವರು.  ಈ ಪಟ್ಟಿಯೇ ಸಂಪೂರ್ಣವಲ್ಲ; ಆದರೆ ಪ್ರತಿಯೊಂದು ಗುಂಪಿನವರ ಬದುಕಿನಲ್ಲಿ ದೇವರ ಕರುಣೆಯ ಅನುಭವವು ನಿರ್ದಿಷ್ಟ ರೀತಿಯಲ್ಲಿ ಇನ್ನಷ್ಟು ಆಳವಾಗಲು ಪ್ರಾರ್ಥನೆಯ ಅಗತ್ಯವಿದೆ.  ಈ ಅಸಂಖ್ಯಾತ ಅಗತ್ಯಗಳನ್ನು ಕಂಡು ಧೃತಿಗೆಡಬೇಡಿ. ಬದಲಾಗಿ, ಪ್ರತಿಯೊಬ್ಬರನ್ನೂ ಅವರ ನಿರ್ದಿಷ್ಟ ಅಗತ್ಯಗಳಿಗೆ ಅನುಸಾರವಾಗಿ ದೇವರ ಕರುಣೆಗೆ ಕ್ರಮೇಣ ಅರ್ಪಿಸುವ ಸಲುವಾಗಿ, ಪ್ರತಿದಿನ ಬೇರೆ ಬೇರೆ ಗುಂಪಿನ ಜನರಿಗಾಗಿ ಪ್ರಾರ್ಥಿಸುವುದು ಮತ್ತು ತ್ಯಾಗವನ್ನು ಅರ್ಪಿಸುವುದು ಒಳ್ಳೆಯದು ಎಂದು ತಿಳಿಯಿರಿ (ನೋಡಿ ದಿನಚರಿ #1210-1230, ನಮ್ಮ ಪ್ರಭು ನೀಡಿದ ನೊವೇನಾ).

ನಿಮ್ಮ ಸುತ್ತಲಿರುವವರ ಅಗತ್ಯಗಳಿಗೆ ನೀವು ಎಷ್ಟು ಗಮನ ಕೊಡುತ್ತೀರಿ?  ಕೆಲವರು ತಮ್ಮ ವಿಶ್ವಾಸದಲ್ಲಿ ದೃಢರಾಗಿದ್ದಾರೆ; ತಮ್ಮ ಬದುಕನ್ನು ಸಂಪೂರ್ಣವಾಗಿ ದೇವರ ಸೇವೆಗೆ ಅರ್ಪಿಸಲು ಯತ್ನಿಸುವ ಅವರಿಗೆ ನಿರಂತರ ಪ್ರೋತ್ಸಾಹದ ಅಗತ್ಯವಿದೆ.  ಇನ್ನು ಕೆಲವರು ಪಾಪದಲ್ಲಿ ಸಿಲುಕಿದ್ದಾರೆ; ತಾವು ಹೋರಾಡುತ್ತಿರುವ ಹೊರೆಗಳಿಂದಲೂ ಅಂಟುಪಟ್ಟುಗಳಿಂದಲೂ ಅವರಿಗೆ ಬಿಡುಗಡೆ ಬೇಕಾಗಿದೆ.  ಮತ್ತಿತರರು ಆಧ್ಯಾತ್ಮಿಕವಾಗಿ ಉತ್ಸಾಹಹೀನರಾಗಿದ್ದಾರೆ, ದಾರಿತಪ್ಪುತ್ತಿದ್ದಾರೆ ಅಥವಾ ದಾರಿತಪ್ಪಿ ಹೋಗಿದ್ದಾರೆ.  ಪ್ರತಿಯೊಬ್ಬರೂ ಭಿನ್ನರು; ಪ್ರತಿಯೊಬ್ಬರ ಬದುಕಿನಲ್ಲೂ ನಿರ್ದಿಷ್ಟ ಅಗತ್ಯಗಳಿವೆ.  ದೇವರ ಕರುಣೆ ಎಲ್ಲರಿಗೂ ಇದೆ ಮತ್ತು ಪ್ರತಿಯೊಬ್ಬರ ಅಗತ್ಯಗಳನ್ನು ಅವರಿಗೆ ಬೇಕಾದ ನಿರ್ದಿಷ್ಟ ರೀತಿಯಲ್ಲಿ ಪೂರೈಸುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು.  ಈ ಸತ್ಯವನ್ನು ನೀವು ಎಷ್ಟು ಸ್ಪಷ್ಟವಾಗಿ ಅರಿಯುತ್ತೀರೋ, ಅಷ್ಟೇ ಹೆಚ್ಚಾಗಿ ಪ್ರತಿಯೊಬ್ಬರನ್ನೂ ದೇವರು ಪ್ರೀತಿಸುವಂತೆ ಪ್ರೀತಿಸುವಿರಿ.  ಪ್ರತಿಯೊಬ್ಬರ ಅಗತ್ಯಗಳಿಗೆ ಅನುಸಾರವಾಗಿ ದೇವರ ಅನುಗ್ರಹವು ಅವರಿಗೆ ದೊರೆಯುವಂತೆ ಮಾಡುವುದರಲ್ಲಿ ನೀವು ಪಾಲ್ಗೊಳ್ಳಲು ನಿಮ್ಮ ಪ್ರಾರ್ಥನೆಗಳು ಒಂದು ಮಾರ್ಗವಾಗುತ್ತವೆ.

ಪ್ರಭುವೇ, ಎಲ್ಲ ಜನರ ಅಗತ್ಯಗಳಿಗೆ ಗಮನ ಕೊಡುವ ಅನುಗ್ರಹವನ್ನು ನನಗೆ ದಯಪಾಲಿಸಿರಿ.  ನಿಮ್ಮ ಕರುಣೆಯು ಜನರಿಗೆ ದೊರೆಯುವ ಮಾರ್ಗಗಳನ್ನು ಅರಿತುಕೊಳ್ಳಲು ಮತ್ತು ನನ್ನ ಪ್ರಾರ್ಥನೆಗಳ ಮೂಲಕ ಅದರಲ್ಲಿ ಪಾಲ್ಗೊಳ್ಳಲು ನನಗೆ ನೆರವಾಗಿರಿ.  ಎಲ್ಲ ಜನರೂ ನಿಮ್ಮನ್ನು ಅರಿತು, ಪೂರ್ಣ ಹೃದಯದಿಂದ ನಿಮ್ಮ ಸೇವೆ ಮಾಡುವಂತಾಗಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆ ಇಡುತ್ತೇನೆ.

ಸಂತ ಮೋನಿಕಾ ಅವರಿಗೆ ನೊವೇನಾ
(ವಿಶೇಷವಾಗಿ ದಾರಿತಪ್ಪಿದ ಮಕ್ಕಳಿಗಾಗಿ ಪ್ರಾರ್ಥಿಸಲಾಗುತ್ತದೆ)
ಆಗಸ್ಟ್ 18–26

ಆಗಸ್ಟ್ 24 – ಪ್ರೇಷಿತ ಸಂತ ಬಾರ್ತಲೊಮಾಯರ ಹಬ್ಬ

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು