Unsplashನಲ್ಲಿ Nghia Le ಅವರ ಛಾಯಾಚಿತ್ರ
ನಮ್ಮ ಗ್ರಹಿಕೆಯನ್ನು ಮೀರಿದ ಮಹಿಮೆ ಮತ್ತು ಪರಿಪೂರ್ಣತೆಯ ಜೀವನಕ್ಕೆ ಸ್ವರ್ಗವು ನಮ್ಮನ್ನು ಆಹ್ವಾನಿಸುತ್ತದೆ. ಸ್ವರ್ಗದಲ್ಲಿಯೂ ಸಹ ದೇವರ ಮತ್ತು ಅವರ ಕರುಣೆಯ ಮಹಿಮಾಮಯ ರಹಸ್ಯವನ್ನು ನಾವು ಸಂಪೂರ್ಣವಾಗಿ ಗ್ರಹಿಸಲಾರೆವು. ಮಹಿಮೆ ಮತ್ತು ಅನುಗ್ರಹದಿಂದ ಪ್ರಕಾಶಿಸುವ ಸಂತರು ಸ್ವರ್ಗದಿಂದ ಪ್ರೀತಿಯಿಂದ ನಮ್ಮನ್ನು ನೋಡುತ್ತಾ, ದೇವರ ಕರುಣೆಯನ್ನು ನಮ್ಮ ಮೇಲೆ ಧಾರಾಳವಾಗಿ ಸುರಿಸಲು ಬಯಸುತ್ತಾರೆ. ಸ್ವರ್ಗವನ್ನು ನಿಮ್ಮ ಜೀವನದ ಪ್ರಧಾನ ಮತ್ತು ಅಂತಿಮ ಗುರಿಯಾಗಿ ಅರಸಿರಿ. ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲವನ್ನೂ ಮಾಡಿರಿ. ಆಗ ನೀವು ಶಾಶ್ವತತೆಗಾಗಿ ಕೂಡಿಸಿಡುವ ನಿಧಿಯು ನೀವು ಆಶಿಸಬಹುದಾದುದಕ್ಕಿಂತಲೂ ಸಮೃದ್ಧವಾಗಿರುತ್ತದೆ (ನೋಡಿ ದಿನಚರಿ #1592).
ಸ್ವರ್ಗವೇ ನಿಮ್ಮ ಜೀವನದ ಏಕೈಕ ನಿಜವಾದ ಬಯಕೆಯೆಂದು ನೀವು ಭಾವಿಸುತ್ತೀರಾ? ಈ ಭೂಮಿಯಲ್ಲಿ ಅರ್ಪಿಸುವ ಪ್ರತಿಯೊಂದು ಪ್ರೀತಿಯ ಕಾರ್ಯವನ್ನೂ ಸ್ವರ್ಗದಲ್ಲಿ ಸ್ಮರಿಸಿ, ಗೌರವಿಸಲಾಗುವುದು. ನಾವು ಭೂಮಿಯಲ್ಲಿ ಮಾಡುವ ಪ್ರತಿಯೊಂದು ಕಾರ್ಯವೂ ಈ ಲೋಕದಿಂದ ನಮ್ಮ ಶಾಶ್ವತ ನಿವಾಸಕ್ಕೆ ತೆರಳುವ ಮಹಿಮಾಮಯ ದಿನದ ಸಿದ್ಧತೆಯಾಗಿರಬೇಕು. ನಿಮ್ಮ ಬಯಕೆಗಳನ್ನು ಕುರಿತು ಚಿಂತಿಸಿ. ಸ್ವರ್ಗದ ಮಹಿಮೆಗಳಿಗೆ ನಿಮ್ಮ ಹೃದಯದಲ್ಲಿ ಮೊದಲ ಸ್ಥಾನವಿಲ್ಲದಿದ್ದರೆ, ಅದನ್ನು ಅರಿತುಕೊಂಡು, ನಿಮ್ಮ ಗಮನವನ್ನು ಸರಿಯಾದ ದಿಕ್ಕಿಗೆ ತಿರುಗಿಸಿ, ಈ ಪರಮ ಪ್ರತಿಫಲದ ಮೇಲೆ ನಿಮ್ಮ ದೃಷ್ಟಿಯನ್ನು ನೆಲೆಗೊಳಿಸಲು ಪ್ರಯತ್ನಿಸಿ. ನೀವು ಸ್ವರ್ಗದ ಸೌಂದರ್ಯವನ್ನೂ ವೈಭವವನ್ನೂ ನೋಡುವಾಗ, ಪ್ರಭು ನಿಮ್ಮಲ್ಲಿ ಉತ್ಕಟ ಬಯಕೆಯನ್ನು ಉಂಟುಮಾಡಿ ನಿಮ್ಮನ್ನು ಅದರತ್ತ ಸೆಳೆಯುವರು.
ಪ್ರಭುವೇ, ಸ್ವರ್ಗದ ಆನಂದಭರಿತ ಹರ್ಷದಿಂದ ನನ್ನ ಹೃದಯವನ್ನು ತುಂಬಿಸಿರಿ. ಈ ಗುರಿಯ ಮೇಲೆಯೇ ನನ್ನ ದೃಷ್ಟಿಯನ್ನು ನೆಲೆಗೊಳಿಸಲು ಮತ್ತು ಆ ಮಧುರ ಭೇಟಿಯ ಸಿದ್ಧತೆಯಾಗಿ ಈ ಜೀವನದಲ್ಲಿ ಎಲ್ಲವನ್ನೂ ಮಾಡಲು ನನಗೆ ಸಹಾಯ ಮಾಡಿರಿ. ಪ್ರಿಯ ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ; ನಾವು ಪರಿಪೂರ್ಣವಾಗಿ ಒಂದಾಗುವ ದಿನದ ಕುರಿತು ನನಗೆ ಮಹತ್ತರ ನಿರೀಕ್ಷೆಯಿದೆ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ನವೆಂಬರ್ 24 – ಯಾಜಕರಾದ ಸಂತ ಆಂದ್ರೇಯ್ ಡುಂಗ್-ಲಾಕ್ ಮತ್ತು ಅವರ ಸಂಗಡಿಗ ಹುತಾತ್ಮರ ಸ್ಮರಣೆ
ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು
ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು




