ಕನ್ನಡ

ಚಿಂತನೆ 349: ನಿಮ್ಮ ಹೃದಯದ ಶಾಂತಿಯನ್ನು ಕಳೆದುಕೊಳ್ಳುವುದು

ಎಡುವಾರ್ಡ್ ಮಾನೆ, ಸಾರ್ವಜನಿಕ ಸ್ವಾಮ್ಯ, Wikimedia Commons ಮೂಲಕ

ವೀಡಿಯೊ

ನಿಮ್ಮ ಹೃದಯದ ಶಾಂತಿ ಮತ್ತು ನೆಮ್ಮದಿಯನ್ನು ಕಸಿದುಕೊಳ್ಳುವ ಶಕ್ತಿ ಯಾವುದಕ್ಕಿದೆ?  ನಿಮ್ಮನ್ನು ಅವಮಾನಿಸಿದರೆ, ಅಪಹಾಸ್ಯ ಮಾಡಿದರೆ, ನಿಮ್ಮ ಬಗ್ಗೆ ತಪ್ಪಾಗಿ ತೀರ್ಪು ನೀಡಿದರೆ, ಸೆರೆಮನೆಗೆ ಹಾಕಿದರೆ, ಹೊಡೆದರೆ ಅಥವಾ ಕೊಂದುಹಾಕಿದರೆ ಏನು?  ಇವುಗಳಲ್ಲಿ ಯಾವುದಾದರೂ ನಿಮ್ಮ ಹೃದಯದಲ್ಲಿರುವ ದೇವರ ಶಾಂತಿಯನ್ನು ಕಸಿದುಕೊಳ್ಳಬಹುದೇ?  ನೀವು ಅದಕ್ಕೆ ಅವಕಾಶಕೊಟ್ಟರೆ ಮಾತ್ರ.  ನೀವು ಅವಕಾಶಕೊಡದ ಹೊರತು ಯಾವುದೂ ನಿಮ್ಮ ಹೃದಯದ ಶಾಂತಿಯನ್ನು ಕಸಿದುಕೊಳ್ಳಲಾರದು ಎಂಬುದನ್ನು ನೀವು ತಿಳಿದುಕೊಂಡು ದೃಢವಾದ ವಿಶ್ವಾಸದಿಂದ ನಂಬುವುದು ಅತ್ಯಗತ್ಯ.  ಈ ಲೋಕದ ಎಲ್ಲದರಿಂದಲೂ ಮುಕ್ತರಾಗಿರುವುದು ನಿಮ್ಮ ಗುರಿಯಾಗಿರಬೇಕು.  ಎಲ್ಲ ಸಿರಿಸಂಪತ್ತು, ಸನ್ಮಾನ, ಗೌರವ, ಭಯ ಮತ್ತು ಎಲ್ಲದರಿಂದಲೂ ನೀವು ಅನಾಸಕ್ತರಾಗಿರಬೇಕು.  ನೀವು ಸಂಪೂರ್ಣವಾಗಿ ಅನಾಸಕ್ತರಾಗಿದ್ದರೆ, ಕ್ರಿಸ್ತರಿಗೆ ಸಂಪೂರ್ಣವಾಗಿ ಅಂಟಿಕೊಂಡಿರಲು ನೀವು ಸ್ವತಂತ್ರರಾಗಿರುತ್ತೀರಿ. ಆಗ ನಿಮ್ಮ ದಾರಿಯಲ್ಲಿ ಏನೇ ಎದುರಾದರೂ, ನಿಮಗೆ ಏನೇ ಸಂಭವಿಸಿದರೂ, ನೀವು ಅವಕಾಶಕೊಡದ ಹೊರತು ನಮ್ಮ ಪ್ರಭುವಿಗೂ ಅವರ ಚಿತ್ತಕ್ಕೂ ಮಾತ್ರ ಅಂಟಿಕೊಂಡಿರುವ ನಿಮ್ಮ ಈ ಬಂಧವನ್ನು ಯಾರೂ ಎಂದಿಗೂ ನಿಮ್ಮಿಂದ ಕಸಿದುಕೊಳ್ಳಲಾರರು (ನೋಡಿ ದಿನಚರಿ #1685).

ಹಿಂದೆ ನಿಮ್ಮ ಶಾಂತಿಯನ್ನು ಕಸಿದುಕೊಂಡ ಸಂಗತಿಗಳ ಕುರಿತು ಚಿಂತಿಸಿ.  ಅವುಗಳನ್ನು ಗುರುತಿಸುವುದರಿಂದ ನೀವು ಯಾವುದಕ್ಕೆ ಅನಾರೋಗ್ಯಕರ ರೀತಿಯಲ್ಲಿ ಅಂಟಿಕೊಂಡಿದ್ದೀರಿ ಎಂಬುದನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ.  ಉದಾಹರಣೆಗೆ, ಸಾರ್ವಜನಿಕ ಅಪಹಾಸ್ಯವು ನಿಮ್ಮ ಶಾಂತಿಯನ್ನು ಕಸಿದುಕೊಂಡಿದ್ದರೆ, ನೀವು ನಿಮ್ಮ ಕೀರ್ತಿಗೆ ಅತಿಯಾಗಿ ಅಂಟಿಕೊಂಡಿದ್ದೀರಿ ಎಂದರ್ಥ.  ಬಡತನವು ನಿಮ್ಮನ್ನು ಖಿನ್ನತೆಗೆ ತಳ್ಳಿದ್ದರೆ, ನೀವು ಹಣಕ್ಕೆ ಅತಿಯಾಗಿ ಅಂಟಿಕೊಂಡಿದ್ದೀರಿ ಎಂದರ್ಥ.  ಸ್ನೇಹಿತರೊಬ್ಬರು ಅಥವಾ ಕುಟುಂಬದ ಸದಸ್ಯರೊಬ್ಬರು ನಿಮ್ಮನ್ನು ತಿರಸ್ಕರಿಸಿದ್ದು ನಿಮ್ಮಲ್ಲಿ ಕೋಪವನ್ನು ಉಂಟುಮಾಡಿದ್ದರೆ, ನೀವು ಆ ವ್ಯಕ್ತಿಗೆ ಅತಿಯಾಗಿ ಅಂಟಿಕೊಂಡಿದ್ದಿರಿ ಎಂದರ್ಥ.  ಈ ಪಟ್ಟಿಯನ್ನು ಹೀಗೆ ಮುಂದುವರಿಸುತ್ತಲೇ ಹೋಗಬಹುದು.  ಸಂಪೂರ್ಣ ಅನಾಸಕ್ತಿ ಎಂಬ ಆಧ್ಯಾತ್ಮಿಕ ಗುರಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟವಾಗಿದ್ದರೂ, ಅದನ್ನು ಸ್ವೀಕರಿಸುವುದು ಇನ್ನೂ ಕಷ್ಟವಾಗಿದ್ದರೂ, ಅದನ್ನು ಆತುರದಿಂದ ತಳ್ಳಿಹಾಕಬೇಡಿ.  ಒಳ್ಳೆಯವೆಂದು ತೋರುವ ಸಂಗತಿಗಳ ಮೇಲೂ ನಿಮಗಿರುವ ಆಸಕ್ತಿಗಳನ್ನು ಕುರಿತು ಚಿಂತಿಸಿ.  ನೀವು ದೇವರಿಗೆ ಮಾತ್ರ ಅಂಟಿಕೊಂಡಿದ್ದರೆ, ಎಲ್ಲ ಒಳ್ಳೆಯ ಸಂಗತಿಗಳೂ ಅದರೊಂದಿಗೆ ಬರುತ್ತವೆ ಎಂಬುದನ್ನು ಅರಿತುಕೊಳ್ಳಿ.

ಪ್ರಭುವೇ, ನನ್ನ ಜೀವನದ ಏಕೈಕ ಸಂಪತ್ತಾಗಿ ನಿಮ್ಮನ್ನೂ ನಿಮ್ಮ ಚಿತ್ತವನ್ನೂ ನಾನು ಆರಿಸಿಕೊಳ್ಳುತ್ತೇನೆ.  ಉಳಿದೆಲ್ಲವೂ ಕಳೆದುಹೋಗುವಂಥವು; ಉಳಿದೆಲ್ಲವನ್ನೂ ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬಹುದು.  ಆದರೆ ಪ್ರಭುವೇ, ನೀವು ನಿತ್ಯರು; ನಾನು ನಿಮ್ಮನ್ನು ಆರಿಸಿಕೊಂಡರೆ, ನಿಮ್ಮನ್ನು ಎಂದಿಗೂ ನನ್ನಿಂದ ಕಸಿದುಕೊಳ್ಳಲಾಗದು.  ಪ್ರಿಯ ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ; ನಿಮಗೂ ನಿಮ್ಮ ಚಿತ್ತಕ್ಕೂ ದೃಢವಾಗಿ ಅಂಟಿಕೊಂಡಿರಲು ನನಗೆ ಸಹಾಯಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಸಂತ ಅಂದ್ರೇಯರ ಕ್ರಿಸ್ಮಸ್ ನೊವೆನಾ
ಸಂಪ್ರದಾಯದಂತೆ ನವೆಂಬರ್ 30ರಿಂದ ಕ್ರಿಸ್ಮಸ್ ಮುನ್ನಾದಿನದವರೆಗೆ ದಿನಕ್ಕೆ 15 ಬಾರಿ ಪ್ರಾರ್ಥಿಸಲಾಗುತ್ತದೆ.

ಆಗಮನ ಕಾಲದ ಸಂಪನ್ಮೂಲಗಳು

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು