ಮಂಗಳವಾರ್ತೆ, ಚಿತ್ರಕಾರ: ಜಾನ್ ವಿಲಿಯಂ ವಾಟರ್ಹೌಸ್
ನಾವೆಲ್ಲರೂ ಕೆಲವೊಮ್ಮೆ ದೊಡ್ಡಸ್ತಿಕೆಯ ಕನಸುಗಳನ್ನು ಕಾಣಬಹುದು. ನಾನು ಶ್ರೀಮಂತನೂ ಪ್ರಸಿದ್ಧನೂ ಆಗಿದ್ದರೆ ಹೇಗಿರುತ್ತಿತ್ತು? ಈ ಲೋಕದಲ್ಲಿ ನನಗೆ ಅಪಾರ ಅಧಿಕಾರವಿದ್ದರೆ ಹೇಗಿರುತ್ತಿತ್ತು? ನಾನು ಪೋಪ್ ಅಥವಾ ರಾಷ್ಟ್ರಪತಿಯಾಗಿದ್ದರೆ ಹೇಗಿರುತ್ತಿತ್ತು? ಆದರೆ ದೇವರು ನಮಗಾಗಿ ಮಹತ್ತರವಾದವುಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ ಎಂಬುದರ ಬಗ್ಗೆ ನಾವು ನಿಶ್ಚಿತರಾಗಿರಬಹುದು. ನಾವು ಎಂದಿಗೂ ಊಹಿಸಲಾಗದ ಮಹೋನ್ನತಿಗೆ ಅವರು ನಮ್ಮನ್ನು ಕರೆಯುತ್ತಾರೆ. ದೇವರು ನಮ್ಮಿಂದ ಏನನ್ನು ಬಯಸುತ್ತಾರೆ ಎಂಬುದು ನಮಗೆ ಅರಿವಾಗತೊಡಗಿದಾಗ, ನಾವು ಓಡಿಹೋಗಿ ಅಡಗಿಕೊಳ್ಳುವುದು ಸಾಮಾನ್ಯವಾಗಿ ಎದುರಾಗುವ ಒಂದು ಸಮಸ್ಯೆ. ದೇವರ ದೈವಿಕ ಚಿತ್ತವು ಅನೇಕ ಬಾರಿ ನಾವು ಹಾಯಾಗಿರುವ ವಲಯದಿಂದ ಹೊರಬರಲು ನಮ್ಮನ್ನು ಕರೆಯುತ್ತದೆ; ಅವರಲ್ಲಿ ಅಪಾರ ಭರವಸೆಯನ್ನಿಡುವುದನ್ನೂ ಅವರ ಪವಿತ್ರ ಚಿತ್ತಕ್ಕೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದನ್ನೂ ಅದು ಬಯಸುತ್ತದೆ (ನೋಡಿ ದಿನಚರಿ #429).
ದೇವರು ನಿಮ್ಮಿಂದ ಏನನ್ನು ಬಯಸುತ್ತಾರೋ ಅದಕ್ಕೆ ನೀವು ತೆರೆದ ಮನಸ್ಸುಳ್ಳವರಾಗಿದ್ದೀರಾ? ಅವರು ಕೇಳುವುದನ್ನೆಲ್ಲ ಮಾಡಲು ನೀವು ಸಿದ್ಧರಿದ್ದೀರಾ? ಅನೇಕ ಬಾರಿ, ಅವರು ಕೇಳುವವರೆಗೆ ನಾವು ಕಾಯುತ್ತೇವೆ, ನಂತರ ಅವರ ಕೋರಿಕೆಯ ಬಗ್ಗೆ ಯೋಚಿಸುತ್ತೇವೆ, ಆಮೇಲೆ ಆ ಕೋರಿಕೆಯ ಕುರಿತು ಭಯದಿಂದ ತುಂಬಿಕೊಳ್ಳುತ್ತೇವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವ ಕೀಲಿಕೈ ಎಂದರೆ, ಅವರು ನಮ್ಮಿಂದ ಏನನ್ನಾದರೂ ಕೇಳುವ ಮೊದಲೇ ಅವರಿಗೆ “ಹೌದು” ಎಂದು ಹೇಳುವುದು. ನಿರಂತರ ವಿಧೇಯತೆಯ ಮನೋಭಾವದಿಂದ ದೇವರಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದು, ಅವರ ಮಹಿಮಾಮಯ ಚಿತ್ತದ ವಿವರಗಳನ್ನು ಅತಿಯಾಗಿ ವಿಶ್ಲೇಷಿಸುವಾಗ ನಮ್ಮನ್ನು ಕಾಡಬಹುದಾದ ಭಯದಿಂದ ನಮ್ಮನ್ನು ಮುಕ್ತಗೊಳಿಸುತ್ತದೆ.
ಪ್ರಿಯ ಪ್ರಭುವೇ, ಈ ದಿನ ನಾನು ನಿಮಗೆ “ಹೌದು” ಎಂದು ಹೇಳುತ್ತೇನೆ. ನೀವು ನನ್ನಿಂದ ಏನನ್ನೇ ಕೇಳಿದರೂ ನಾನು ಮಾಡುತ್ತೇನೆ. ನೀವು ನನ್ನನ್ನು ಎಲ್ಲಿಗೇ ನಡೆಸಿದರೂ ನಾನು ಹೋಗುತ್ತೇನೆ. ನೀವು ಏನನ್ನೇ ಕೇಳಿದರೂ, ನನ್ನನ್ನು ನಿಮಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಅನುಗ್ರಹವನ್ನು ನನಗೆ ದಯಪಾಲಿಸಿ. ನನ್ನ ಜೀವನದ ಮಹಿಮಾಮಯ ಉದ್ದೇಶವು ನೆರವೇರುವಂತೆ ನಾನು ನನ್ನನ್ನೇ ನಿಮಗೆ ಅರ್ಪಿಸುತ್ತೇನೆ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ನಾಲ್ಕನೆಯ ದಿನ: ದೈವಿಕ ಕರುಣೆಯ ಭಾನುವಾರದ ಸಿದ್ಧತೆಗಾಗಿ ನೊವೇನಾ
ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು
ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು




