ಕನ್ನಡ

ಧ್ಯಾನ 184: ಯಾಜಕರ ಸೇವಾಕಾರ್ಯದ ಕರುಣೆ

ಮಾಥಾದ ಸಂತ ಜಾನ್ ಅವರ ಯಾಜಕ ದೀಕ್ಷೆ ಮತ್ತು ಪ್ರಥಮ ದಿವ್ಯಬಲಿ, ಚಿತ್ರಕಾರ: ವಿಸೆಂಟೆ ಕಾರ್ಡೂಚೊ

ವೀಡಿಯೊ

ಇಲ್ಲ, ಯಾಜಕರು ಪರಿಪೂರ್ಣರಲ್ಲ.  ಅವರು ದಿನನಿತ್ಯ ಪಾಪ ಮಾಡುತ್ತಾರೆ.  ಉಳಿದ ಎಲ್ಲ ಮಾನವರಂತೆಯೇ ಅವರಿಗೂ ತಮ್ಮ ದೈನಂದಿನ ಜೀವನದಲ್ಲಿ ನಿರಂತರ ಪಶ್ಚಾತ್ತಾಪ ಮತ್ತು ಮನಃಪರಿವರ್ತನೆಯ ಅಗತ್ಯವಿದೆ.  ಆದರೂ ಅವರು ಯಾಜಕರು.  ಅವರ ಪವಿತ್ರ ಯಾಜಕ ದೀಕ್ಷೆಯ ಕಾರಣದಿಂದಾಗಿ ಪ್ರಭು ಅವರ ಮೂಲಕ ಸ್ಪಷ್ಟವಾದರೂ ನಿಗೂಢವಾದ ರೀತಿಯಲ್ಲಿ ಮಾತನಾಡುತ್ತಾರೆ.  ಕೆಲವರು ದಿವ್ಯಬಲಿಯಲ್ಲಿ ಪ್ರತಿಷ್ಠಾಪನೆಯ ವಚನಗಳನ್ನು ಅಥವಾ ಸಮಾಧಾನದ ಸಂಸ್ಕಾರದಲ್ಲಿ ಪಾಪವಿಮೋಚನೆಯ ವಚನಗಳನ್ನು ಉಚ್ಚರಿಸುವಾಗ ಮಾತ್ರ ಕ್ರಿಸ್ತನ ಅಧಿಕಾರದಿಂದ ಮಾತನಾಡುತ್ತಾರೆ.  ಇನ್ನು ಕೆಲವರು ತಮ್ಮ ಯಾಜಕ ದೀಕ್ಷೆಯ ವರದಾನವನ್ನು ಸ್ವೀಕರಿಸುತ್ತಾರೆ; ದೇವರು ಅವರನ್ನು ಅವರ ಬೋಧನೆ, ಪವಿತ್ರ ಜೀವನ ಮತ್ತು ತಮ್ಮ ಮಂದೆಗೆ ನೀಡುವ ಸಲಹೆಯ ಮಾತುಗಳ ಮೂಲಕ ಇನ್ನೂ ಅನೇಕ ರೀತಿಗಳಲ್ಲಿ ಬಳಸಿಕೊಳ್ಳುತ್ತಾರೆ.  ಇಂತಹ ಪವಿತ್ರ ಯಾಜಕರನ್ನು ಹುಡುಕಿ.  ಅವರಿಗೆ ಕಿವಿಗೊಡಿ ಮತ್ತು ಅವರ ಮೂಲಕ ನಿಮ್ಮನ್ನು ಮಾರ್ಗದರ್ಶಿಸಲು ಪ್ರಭುವಿಗೆ ಅವಕಾಶ ನೀಡಿ.  ಏಕೆಂದರೆ ಅವರ ಮೂಲಕ ನುಡಿಯುವ ದೇವರ ಸ್ವರವನ್ನು ಆಲಿಸುವಾಗ, ನೀವು ಹೇರಳವಾದ ಕರುಣೆಯಿಂದ ಆಶೀರ್ವದಿಸಲ್ಪಡುವಿರಿ (ನೋಡಿ ದಿನಚರಿ #968).

ದೇವರು ನಿಮ್ಮ ಜೀವನದಲ್ಲಿ ಇರಿಸಿರುವ ಯಾಜಕರ ಕುರಿತು ಇಂದು ಪೂರ್ಣ ಪ್ರೀತಿಭಾವದಿಂದ ಚಿಂತಿಸಿ.  ಅವರು ನಿಮ್ಮ ಸ್ವಂತ ಧರ್ಮಕೇಂದ್ರದ ಯಾಜಕರಾಗಿರಬಹುದು, ಅಥವಾ ಬರಹದ ಮೂಲಕ ಮಾತನಾಡುವ ಯಾಜಕರಾಗಿರಬಹುದು, ಅಥವಾ ಆಧುನಿಕ ಸಂವಹನದ ಬೇರಾವುದಾದರೂ ಮಾಧ್ಯಮದ ಮೂಲಕ ಮಾತನಾಡುವ ಯಾಜಕರಾಗಿರಬಹುದು.  ದೇವರು ತಮ್ಮ ಪವಿತ್ರ ಯಾಜಕರ ಕಡೆಗೆ ನಿಮ್ಮನ್ನು ನಡೆಸುವರು ಮತ್ತು ಅವರ ಮೂಲಕ ನೇರವಾಗಿ ನಿಮ್ಮೊಂದಿಗೆ ಮಾತನಾಡುವರು.  ಅವರಿಗೆ ಕಿವಿಗೊಡಿ, ಏಕೆಂದರೆ ಅವರ ಮಾತುಗಳನ್ನು ಕೇಳುವಾಗ ನೀವು ದೇವರ ಕರುಣೆಯ ಮಾತುಗಳನ್ನು ಕೇಳುವಿರಿ.

ಪ್ರಭುವೇ, ಜಗತ್ತಿನಲ್ಲಿ ಮುಂದುವರಿಯುತ್ತಿರುವ ನಿನ್ನ ಸಂಸ್ಕಾರಾತ್ಮಕ ಸಾನ್ನಿಧ್ಯದ ಸಂಕೇತವಾಗಿ ಪವಿತ್ರ ಯಾಜಕತ್ವವನ್ನು ಸ್ಥಾಪಿಸಿದ್ದಕ್ಕಾಗಿ ನಿನಗೆ ಧನ್ಯವಾದ ಸಲ್ಲಿಸುತ್ತೇನೆ.  ಎಲ್ಲ ಯಾಜಕರಿಗಾಗಿ, ವಿಶೇಷವಾಗಿ ನನ್ನ ಆಧ್ಯಾತ್ಮಿಕ ಪಾಲನೆಯ ಜವಾಬ್ದಾರಿಯನ್ನು ನೀನು ಯಾರಿಗೆ ವಹಿಸಿರುವೆಯೋ ಅವರಿಗಾಗಿ ಪ್ರಾರ್ಥಿಸುತ್ತೇನೆ.  ಅವರ ಪವಿತ್ರ ಸೇವಾಕಾರ್ಯದಲ್ಲಿ ಅವರ ಮೂಲಕ ಮಾತನಾಡುವ ನಿನಗೆ ನಾನು ಸದಾ ಮುಕ್ತನಾಗಿರಲಿ.  ಅವರ ತುಟಿಗಳಿಂದ ಹೊರಹೊಮ್ಮುವ ನಿನ್ನ ಸ್ವರವನ್ನು ಕೇಳಿ ನಾನು ಸಂಪೂರ್ಣ ಸಮರ್ಪಣೆಯಿಂದಲೂ ಉದಾರ ಮನಸ್ಸಿನಿಂದಲೂ ಸ್ಪಂದಿಸಲಿ. ಪ್ರಿಯ ಪ್ರಭುವೇ, ಯಾಜಕರ ಮೂಲಕ ನುಡಿಯುವ ನಿನ್ನ ಸ್ವರವನ್ನು ನಾನು ಸದಾ ಆಲಿಸುವಂತೆ ನನಗೆ ದೀನತೆಯನ್ನು ದಯಪಾಲಿಸು.  ಯೇಸುವೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೇನೆ.

ಜುಲೈ 3 – ಪ್ರೇಷಿತ ಸಂತ ತೋಮಸರ ಹಬ್ಬ

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು