ಕನ್ನಡ

ಚಿಂತನೆ 240: ಜೀವನದಲ್ಲಿ ಸಿಹಿಯೋ ಕಹಿಯೋ?

ಸಂತ ಪೇತ್ರ ರಕ್ತಸಾಕ್ಷಿಯ ಮರಣ, ಜೊವಾನ್ನಿ ಜಿರೊಲಾಮೊ ಸವೊಲ್ಡೊ ಅವರ ಕೃತಿ

ವೀಡಿಯೊ

ನಿಮ್ಮ ಜೀವನದಲ್ಲಿ ನೀವು ಯಾವುದನ್ನು ಹೆಚ್ಚು ಬಯಸುತ್ತೀರಿ?  ಪ್ರತಿದಿನ ಇಂದ್ರಿಯಗಳಿಗೆ ಸಿಹಿಯಾದ ಅನುಭವಗಳನ್ನೋ ಅಥವಾ ಕಹಿಯಾದ ಅನುಭವಗಳನ್ನೋ?  ಬೇರೆ ಮಾತಿನಲ್ಲಿ ಹೇಳುವುದಾದರೆ, ನಿಮ್ಮ ದೈನಂದಿನ ಜೀವನದ ಅನೇಕ ಅಂಶಗಳಲ್ಲಿ ಆನಂದಪಡಲು ನೀವು ಬಯಸುತ್ತೀರಾ ಅಥವಾ ನೀವು ನೆರವೇರಿಸುವ ದೈನಂದಿನ ಕರ್ತವ್ಯವು ನಿಮ್ಮ ಇಂದ್ರಿಯಗಳಲ್ಲಿ ಒಂದು ರೀತಿಯ ಕಹಿಯನ್ನು ಉಳಿಸಬೇಕೆಂದು ಬಯಸುತ್ತೀರಾ?  ಹೆಚ್ಚಿನ ಜನರಿಗೆ ಉತ್ತರ ಸರಳವಾಗಿದೆ.  “ಸಿಹಿ”ಯೇ ಬಹಳ ಉತ್ತಮ.  ಆದರೆ ನಿಜವಾಗಿಯೂ ಹಾಗೆಯೇನಾ?  ಕುತೂಹಲಕರವೆಂದರೆ, ಜೀವನದಲ್ಲಿನ ಸಿಹಿ ಅಥವಾ ಕಹಿಯ ಅನುಭವವು ಪವಿತ್ರ ಜೀವನದತ್ತ ನಡೆಸುವ ಉತ್ತಮ ಮಾರ್ಗದರ್ಶಿಯಲ್ಲ.  ಕೆಲವೊಮ್ಮೆ ಪಾಪವೂ ನಮಗೆ “ಸಿಹಿ”ಯೆನಿಸಬಹುದು; ಅದೇ ವೇಳೆ ಪವಿತ್ರತೆಯ ಕಾರ್ಯಗಳು ಆರಂಭದಲ್ಲಿ “ಕಹಿ”ಯೆನಿಸಬಹುದು. ಇದನ್ನು ಅರ್ಥಮಾಡಿಕೊಳ್ಳುವುದರಿಂದ ನಾವು ದೇವರ ಚಿತ್ತವನ್ನು ಇನ್ನಷ್ಟು ಆಳವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ.  ಅವರ ಚಿತ್ತವೆಂಬ ಒಂದೇ ಕಾರಣಕ್ಕಾಗಿ ಅವರ ಚಿತ್ತವನ್ನು ಅರಸುವುದೇ ನಮ್ಮ ಗುರಿಯಾಗಿರಬೇಕು.  ಅವರ ಚಿತ್ತವನ್ನು ಸ್ವೀಕರಿಸುವುದರಿಂದ ಉಂಟಾಗುವ ಆನಂದವನ್ನಾಗಲಿ ಯಾತನೆಯನ್ನಾಗಲಿ ನಾವು ಹೆಚ್ಚು ಇಷ್ಟಪಡಬಾರದು.  ದೇವರ ಚಿತ್ತವು ಮಹತ್ತರ ತ್ಯಾಗವನ್ನು ಬೇಡಿ, ನಮ್ಮ ಇಂದ್ರಿಯಗಳಿಗೆ ಯಾತನೆಯ ಅನುಭವವನ್ನು ಉಂಟುಮಾಡುವುದಾದರೆ, ಹಾಗೆಯೇ ಆಗಲಿ.  ಅವರ ಚಿತ್ತವು ನಮ್ಮನ್ನು ಪ್ರೀತಿಯ ಕೊಡುಕೊಳ್ಳುವಿಕೆಗೆ ಸೆಳೆದು, ನಮಗೆ ಮಧುರವಾದ ಆನಂದವನ್ನು ನೀಡುವುದಾದರೆ, ಹಾಗೆಯೇ ಆಗಲಿ.  ಸಂಪೂರ್ಣ ಅನಾಸಕ್ತಿಯ ಮಟ್ಟವನ್ನು ತಲುಪುವುದು ಕಷ್ಟವಾದರೂ, ಅದಕ್ಕಾಗಿ ನಾವು ಶ್ರಮಿಸಬೇಕು.  ಅವರ ಚಿತ್ತ, ಅವರ ಚಿತ್ತ ಮಾತ್ರವೇ ನಮ್ಮ ಗಮನದ ಕೇಂದ್ರವಾಗಿರಬೇಕು.  ಅವರ ಚಿತ್ತದಲ್ಲಿ ಮಾತ್ರವೇ ನಾವು ಅವರ ಸಮೃದ್ಧ ಕರುಣೆಯನ್ನು ಕಂಡುಕೊಳ್ಳುತ್ತೇವೆ (ನೋಡಿ ದಿನಚರಿ #1245).

ದೇವರ ಚಿತ್ತಕ್ಕೂ, ಅದನ್ನು ಸ್ವೀಕರಿಸುವುದರಿಂದ ನಿಮಗಾಗುವ ಆನಂದ ಅಥವಾ ಅಸಮಾಧಾನಕ್ಕೂ ಇರುವ ವ್ಯತ್ಯಾಸವನ್ನು ಕುರಿತು ಚಿಂತಿಸಿ.  ಅವರ ಚಿತ್ತವು ನಿಮ್ಮನ್ನು ತ್ಯಾಗಕ್ಕೆ ಕರೆದಾಗ, ಅದು ಒಂದು ರೀತಿಯ “ಕಹಿ” ಅನುಭವವೆನಿಸುತ್ತದೆ.  ಅದು ನಿಮ್ಮ ಇಂದ್ರಿಯಗಳಿಗೆ ಸವಾಲಾಗಬಹುದು ಎಂಬ ಅರ್ಥದಲ್ಲಿ ಕಹಿಯಾಗಿರುತ್ತದೆ.  ಇದರ ಬಗ್ಗೆ ಚಿಂತಿಸಬೇಡಿ.  ಎಲ್ಲದರಲ್ಲಿಯೂ ಅವರ ಚಿತ್ತವನ್ನು ಅರಸಿ; ಆಗ ನಿಮ್ಮ ಹೃದಯದ ಸಂತೋಷವು ಅಂತಿಮವಾಗಿ ನಿಮಗಾಗುವ ಇತರ ಎಲ್ಲ ತಕ್ಷಣದ ಅನುಭವಗಳನ್ನೂ ಮೀರಿಸುತ್ತದೆ.  ಅವರ ಚಿತ್ತವು ಅವರ ಸಮೃದ್ಧ ಕರುಣೆಗೆ ಬಾಗಿಲು ತೆರೆಯುತ್ತದೆ.

ಪ್ರಭುವೇ, ಎಲ್ಲ ವಿಷಯಗಳಲ್ಲಿಯೂ ನಾನು ನಿನ್ನ ಪರಮ ಪವಿತ್ರ ಚಿತ್ತವನ್ನು ಅರಸುತ್ತೇನೆ.  ನಿನ್ನ ಚಿತ್ತವು ಎಷ್ಟೇ ಕಷ್ಟಕರವಾಗಿದ್ದರೂ ಅಥವಾ ಎಷ್ಟೇ ಆನಂದದಾಯಕವಾಗಿದ್ದರೂ ಅದನ್ನೇ ಆರಿಸಿಕೊಳ್ಳಲು ನನಗೆ ಸಹಾಯಮಾಡು.  ಪ್ರಿಯ ಪ್ರಭುವೇ, ನನ್ನನ್ನು ಶುದ್ಧೀಕರಿಸು; ನೀನು ನನಗೆ ಮಾಡಲು ಕರೆ ನೀಡುವ ಎಲ್ಲವನ್ನೂ ನಾನು ಸ್ವೀಕರಿಸುವುದರಿಂದ ನಿನ್ನ ಪರಿಪೂರ್ಣ ಕರುಣೆಯು ಫಲಿಸುವಂತೆ, ಜೀವನದಲ್ಲಿ ನನಗೆ ಒಂದೇ ಗುರಿಯನ್ನು ದಯಪಾಲಿಸು.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ಆಗಸ್ಟ್ 28 – ಹಿಪ್ಪೊದ ಸಂತ ಅಗಸ್ಟಿನ್, ಧರ್ಮಾಧ್ಯಕ್ಷರು ಮತ್ತು ಧರ್ಮಸಭೆಯ ಪಂಡಿತರು

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು