ಕನ್ನಡ

ಚಿಂತನೆ 241: ನಿಮ್ಮ ನಿರ್ದಿಷ್ಟ ಪಾಪಗಳಿಗೆ ಪರಿಹಾರ

ದಶಾಜ್ಞೆಗಳೊಂದಿಗೆ ಸೀನಾಯಿ ಬೆಟ್ಟದಿಂದ ಇಳಿದುಬರುವ ಮೋಶೆ, ಫರ್ಡಿನಾಂಡ್ ಬೋಲ್ ಅವರ ಕೃತಿ

ವೀಡಿಯೊ

ನಿಮ್ಮ ಪಾಪಗಳನ್ನು ನೀವು ಹೇಗೆ ಜಯಿಸುತ್ತೀರಿ?  ಪ್ರತಿಯೊಂದು ಪಾಪವೂ ಭಿನ್ನವಾಗಿದೆ; ಅವುಗಳಿಂದ ದೂರವಾಗಲು ನಿರ್ದಿಷ್ಟ ಪ್ರಾರ್ಥನೆ ಮತ್ತು ತ್ಯಾಗದ ಅಗತ್ಯವಿದೆ.  ಮೂರು ಸಾಮಾನ್ಯ ಪಾಪಗಳು ಇವು: ಶರೀರಕ್ಕೆ ಸಂಬಂಧಿಸಿದ ಪಾಪಗಳು, ಕೋಪದ ಪಾಪಗಳು ಮತ್ತು ಅಹಂಕಾರದ ಪಾಪಗಳು.  ಈ ಪ್ರತಿಯೊಂದು ಪಾಪವನ್ನೂ ಜಯಿಸಬಹುದು, ಆದರೆ ವಿಶೇಷ ಗಮನದ ಅಗತ್ಯವಿರಬಹುದು.  ನೀವು ಶರೀರಕ್ಕೆ ಸಂಬಂಧಿಸಿದ ಪಾಪಗಳೊಂದಿಗೆ ಹೋರಾಡುತ್ತಿದ್ದರೆ, ಉಪವಾಸ ಮಾಡಲು ಪ್ರಯತ್ನಿಸಿ.  ವಿವಿಧ ಬಗೆಯ ಆಹಾರ ಅಥವಾ ಪಾನೀಯಗಳಿಂದ ದೂರವಿರುವ ಮೂಲಕ, ದೈಹಿಕವಾಗಿ ನಿಮಗೆ ಆನಂದ ನೀಡುವಂಥದ್ದನ್ನು ತ್ಯಜಿಸಿ.  ಕೋಪದ ಪಾಪಗಳಿಗಾಗಿ, ನಿಮಗೆ ಯಾರ ಮೇಲೆ ಕೋಪವಿದೆಯೋ ಆ ವ್ಯಕ್ತಿಗೆ ಏನಾದರೂ ಒಳ್ಳೆಯದನ್ನು ಮಾಡಲು ಅಥವಾ ಅವರೊಂದಿಗೆ ದಯೆಯಿಂದ ಒಂದೆರಡು ಮಾತುಗಳನ್ನಾಡಲು ಪ್ರಯತ್ನಿಸಿ.  ಅವರಿಗಾಗಿ ಪ್ರಾರ್ಥಿಸಿ ಮತ್ತು ಶಿಲುಬೆಯ ಮೇಲಿಂದ ಯೇಸು ಹೇಳಿದ ಮಾತುಗಳನ್ನು ಹೇಳಿ: “ಪಿತನೇ, ಇವರನ್ನು ಕ್ಷಮಿಸು; ತಾವು ಏನು ಮಾಡುತ್ತಿದ್ದೇವೆಂದು ಇವರು ಅರಿಯರು.”  ಅಹಂಕಾರದ ಪಾಪಗಳಿಗಾಗಿ, ಪ್ರಾರ್ಥನಾಪೂರ್ವಕ ವಿನಮ್ರತೆಯಿಂದ ನಮ್ಮ ಕರ್ತನ ಮುಂದೆ ಸಾಷ್ಟಾಂಗವೆರಗಿ, ನಿಮ್ಮನ್ನು ನೀವು ಸಂಪೂರ್ಣವಾಗಿ ಅವರಿಗೆ ಅರ್ಪಿಸಿಕೊಳ್ಳಲು ಪ್ರಯತ್ನಿಸಿ.  ನೀವು ಹೋರಾಡುತ್ತಿರುವ ಪಾಪಗಳಿಗಾಗಿ ಈ ನಿರ್ದಿಷ್ಟ ಪರಿಹಾರಗಳನ್ನು ಅರ್ಪಿಸಲು ಪ್ರಯತ್ನಿಸಿ; ಆಗ ದೇವರ ಕರುಣೆಯು ನಿಮ್ಮ ಮೇಲೆ ಹೇರಳವಾಗಿ ಸುರಿಯಲ್ಪಡುವುದು (ನೋಡಿ ದಿನಚರಿ #1248).

ನೀವು ಯಾವ ನಿರ್ದಿಷ್ಟ ಪಾಪಗಳೊಂದಿಗೆ ಹೋರಾಡುತ್ತಿದ್ದೀರಿ?  ದಶಾಜ್ಞೆಗಳಲ್ಲಿ ಪ್ರತಿಯೊಂದನ್ನೂ ವಿವರವಾಗಿ ಅಥವಾ ಏಳು ಪ್ರಧಾನ ಪಾಪಗಳನ್ನು ಗಮನದಲ್ಲಿಟ್ಟುಕೊಂಡು, ನಿಯಮಿತವಾಗಿ ನಿಮ್ಮ ಆತ್ಮಸಾಕ್ಷಿಯನ್ನು ಕೂಲಂಕಷವಾಗಿ ಪರಿಶೀಲಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.  ನೀವು ಹೋರಾಡುತ್ತಿರುವ ಮುಖ್ಯ ಪಾಪಗಳನ್ನು, ವಿಶೇಷವಾಗಿ ರೂಢಿಯಾಗಿರುವ ಪಾಪಗಳನ್ನು ಗುರುತಿಸಿದ ನಂತರ, ಅವುಗಳಿಗೆ ಪವಿತ್ರವಾದ ಪರಿಹಾರವನ್ನು ಹುಡುಕಿ.  ಪಾಪಗಳಿಗಾಗಿ ಮಾಡುವ ಪ್ರಾಯಶ್ಚಿತ್ತವು ಔಷಧಿಯಂತಿದೆ.  ಪ್ರತಿಯೊಂದು ಕಾಯಿಲೆಗೂ ಸರಿಯಾದ ಔಷಧಿ ಬೇಕು.  ನಿಮ್ಮ ಆತ್ಮಕ್ಕಾಗಿ ಈ “ಔಷಧಿಗಳನ್ನು” ದೇವರು ನಿಮಗೆ ತೋರಿಸಿಕೊಡುವ ಮಾರ್ಗಗಳಿಗೆ ತೆರೆದ ಮನಸ್ಸುಳ್ಳವರಾಗಿರಿ ಮತ್ತು ಹಿಂಜರಿಯದೆ ಅವುಗಳನ್ನು ಸ್ವೀಕರಿಸಿ.  ನೀವು ಮಾಡುವ ಪ್ರತಿಯೊಂದು ಪ್ರಾಯಶ್ಚಿತ್ತವೂ ನಿಮ್ಮ ಜೀವನದಲ್ಲಿ ಕರುಣೆಯ ಬಾಗಿಲನ್ನು ಹೊಸದಾದ ಮತ್ತು ಆಳವಾದ ರೀತಿಯಲ್ಲಿ ತೆರೆಯುತ್ತದೆ.

ಕರ್ತನೇ, ನನ್ನ ಅನೇಕ ಪಾಪಗಳಿಂದ ನಾನು ಅಸ್ವಸ್ಥನಾಗಿದ್ದೇನೆಂದು ನನಗೆ ತಿಳಿದಿದೆ.  ನಾನು ದುರ್ಬಲನಾಗಿದ್ದೇನೆ ಮತ್ತು ನನಗೆ ಸ್ವಸ್ಥತೆ ಬೇಕಾಗಿದೆ.  ನನ್ನ ಪಾಪಗಳನ್ನು ಗುರುತಿಸಲು ಮತ್ತು ನಿನ್ನ ಕರುಣೆಯೊಂದಿಗೆ ಅವುಗಳನ್ನು ಎದುರಿಸಲು ನನಗೆ ಸಹಾಯ ಮಾಡು.  ನಾನು ನಿನಗೆ ಇನ್ನಷ್ಟು ಹತ್ತಿರವಾಗುವಂತೆ ಅವುಗಳನ್ನು ಜಯಿಸುವ ಸಾಧನಗಳನ್ನು ನನಗೆ ದಯಪಾಲಿಸು.  ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ; ನಿನ್ನಿಂದ ನನ್ನನ್ನು ದೂರವಿಡುವ ಎಲ್ಲದರಿಂದಲೂ ನನ್ನನ್ನು ಮುಕ್ತಗೊಳಿಸು.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ಆಗಸ್ಟ್ 29 – ರಕ್ತಸಾಕ್ಷಿ ಸ್ನಾನಿಕ ಸಂತ ಯೋವಾನ್ನರ ಯಾತನೆ—ಸ್ಮರಣೆ

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು