ಕನ್ನಡ

ಚಿಂತನೆ 273: ಲೌಕಿಕ ಬಂಧಗಳಿಲ್ಲ, ದೇವರ ಮೇಲಿನ ಪ್ರೀತಿ ಮಾತ್ರ

ಪುನರುತ್ಥಾನದ ನಂತರ ಮಗ್ದಲದ ಮರಿಯಳಿಗೆ ಕ್ರಿಸ್ತನ ದರ್ಶನ, ರಷ್ಯನ್ ಮ್ಯೂಸಿಯಂ ಅವರಿಂದ

ವೀಡಿಯೊ

ದೇವರೊಂದಿಗಿನ ನಮ್ಮ ಸಂಬಂಧದ ಉತ್ತುಂಗದಲ್ಲಿ, ಉಳಿದೆಲ್ಲ ಲೌಕಿಕ ಬಂಧಗಳಿಂದ ನಾವು ಮುಕ್ತರಾಗುತ್ತೇವೆ. ಹೀಗೆ ಮಹಾ ಉತ್ಸಾಹದಿಂದಲೂ ದೃಢ ಉದ್ದೇಶದಿಂದಲೂ ದೇವರ ಕಡೆಗೆ ಓಡಲು ಯಾವುದೂ ನಮ್ಮನ್ನು ತಡೆಯುವುದಿಲ್ಲ.  ಈ ಜೀವನದ ಪ್ರತಿಯೊಂದು ವ್ಯಾಮೋಹದಿಂದಲೂ ನಾವು ಮುಕ್ತರಾಗಬೇಕು. ಆಗ ನಾವು ಅಂಟಿಕೊಂಡಿರುವುದು ದೇವರಿಗೆ ಮತ್ತು ಅವರ ಪವಿತ್ರ ಚಿತ್ತಕ್ಕೆ ಮಾತ್ರವಾಗಿರುತ್ತದೆ.  ಇದರರ್ಥ ನಾವು ಇತರರ ಮೇಲಿನ ಪ್ರೀತಿಯನ್ನು ನಿರ್ಲಕ್ಷಿಸಬೇಕು ಎಂದಲ್ಲ.  ಕುಟುಂಬದ ಪ್ರೀತಿಯ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ.  ನಿಮ್ಮ ಕುಟುಂಬದವರ ಮೇಲಿನ ಪ್ರೀತಿಗೆ ವಿಶೇಷ ಗಮನ ನೀಡಬೇಕು; ಆ ಪ್ರೀತಿ ಸಂಪೂರ್ಣವೂ ಹಿಂತೆಗೆದುಕೊಳ್ಳಲಾಗದ್ದೂ ಆಗಬೇಕು.  ಆದರೂ, ನಿಮ್ಮ ಕುಟುಂಬವನ್ನು ಪರಿಪೂರ್ಣ ಪ್ರೀತಿಯಿಂದ ಪ್ರೀತಿಸುವುದಕ್ಕೂ ಲೌಕಿಕ ರೀತಿಯಲ್ಲಿ ಅವರಿಗೆ ಅಂಟಿಕೊಂಡಿರುವುದಕ್ಕೂ ವ್ಯತ್ಯಾಸವಿದೆ.  ವಾಸ್ತವವಾಗಿ, ನೀವು ಕ್ರಿಸ್ತನ ಹೃದಯದಿಂದ ಪ್ರೀತಿಸಬೇಕಾದರೆ ಪವಿತ್ರ ಅನಾಸಕ್ತಿ ಅಗತ್ಯವಾಗಿದೆ.  ಜೀವನದಲ್ಲಿ ಯೇಸುವನ್ನು ಪ್ರೀತಿಸುವುದೇ ನಿಮ್ಮ ಏಕೈಕ ಬಯಕೆಯಾಗಿದ್ದರೆ, ಅದು ಇತರರ ಮೂಲಕ ನಿಮ್ಮನ್ನು ಅವರ ಕಡೆಗೆ ನಡೆಸುತ್ತದೆ.  ನಿಮ್ಮ ಕುಟುಂಬದಲ್ಲಿ ಮತ್ತು ನಿಮ್ಮ ಲೌಕಿಕ ಕರೆಯ ಎಲ್ಲ ಅಂಶಗಳಲ್ಲಿ ನೀವು ಕ್ರಿಸ್ತನನ್ನು ಪ್ರೀತಿಸುವಿರಿ.  ಆದರೆ ನೀವು ಈ ಪರಿಪೂರ್ಣ ಪ್ರೀತಿಯಿಂದ ಅವರನ್ನು ಪ್ರೀತಿಸುವಾಗ, ಎಲ್ಲರ ಮೇಲಿನ ನಿಮ್ಮ ಪ್ರೀತಿಯೂ ಕ್ರಿಸ್ತನ ಮೇಲಿನ ಪ್ರೀತಿಯಾಗಿರುತ್ತದೆ.  ಹೀಗಾದಾಗ, ಉಳಿದೆಲ್ಲ ಬಾಂಧವ್ಯಗಳು ದೇವರ ಮೇಲಿನ ನಿಮ್ಮ ಪ್ರೀತಿಯಾಗಿ ಪರಿವರ್ತನೆಗೊಳ್ಳುತ್ತವೆ (ನೋಡಿ ದಿನಚರಿ #1365).

ಈ ಲೋಕದಲ್ಲಿ ನೀವು ಯಾವುದನ್ನು ಪ್ರೀತಿಸುತ್ತೀರಿ?  ನೀವು ಯಾವುದಕ್ಕೆ ಅಂಟಿಕೊಂಡಿದ್ದೀರಿ?  ಈ ಲೋಕದಲ್ಲಿ ನೀವು ಅತಿ ಹೆಚ್ಚು ಪ್ರೀತಿಸುವವರ ಬಗ್ಗೆ ಯೋಚಿಸಿ.  ದೇವರು ನಿಮ್ಮ ಜೀವನದಲ್ಲಿ ಇರಿಸಿರುವ ಕುಟುಂಬದ ಸದಸ್ಯರು ಮತ್ತು ಇತರರು ಇವರಲ್ಲಿ ಸೇರಿದ್ದಾರೆ ಎಂದು ಆಶಿಸೋಣ.  ಈಗ ಆ ಪ್ರೀತಿಯನ್ನು ಪರಿಶೀಲಿಸಿ, ಅದು ಕ್ರಿಸ್ತನಲ್ಲಿ ಕೇಂದ್ರೀಕೃತವಾಗಿದೆಯೇ ಎಂದು ಚಿಂತಿಸಿ.  ಅವರನ್ನು ಪ್ರೀತಿಸುವ ಮೂಲಕ ನೀವು ನಿಜವಾಗಿಯೂ ದೇವರನ್ನು ಪ್ರೀತಿಸುತ್ತಿದ್ದೀರಾ?  ಅಥವಾ ಈ ಲೋಕದ ಪ್ರೀತಿಯ ಸಂಬಂಧಗಳೇ ನಿಮ್ಮ ಅಂತಿಮ ಗುರಿಗಳಾಗಿ ಉಳಿದಿವೆಯೇ?  ದೇವರ ಮೇಲಿನ ಪ್ರೀತಿಯನ್ನೇ ನಿಮ್ಮ ಜೀವನದ ಏಕೈಕ ಕೇಂದ್ರವನ್ನಾಗಿ ಮಾಡಿಕೊಳ್ಳುವ ಗುರಿಯ ಕುರಿತು ಚಿಂತಿಸಿ. ನಿಮ್ಮ ಜೀವನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಮತ್ತು ಅವರ ಮೂಲಕವೂ, ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲಿಯೂ ನೀವು ದೇವರನ್ನು ಹೇಗೆ ಪ್ರೀತಿಸುತ್ತೀರಿ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಿ.

ನನ್ನ ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ; ಎಲ್ಲಕ್ಕಿಂತ ಹೆಚ್ಚಾಗಿ ಮತ್ತು ಎಲ್ಲದರಲ್ಲಿಯೂ ನಿಮ್ಮನ್ನು ಪ್ರೀತಿಸಲು ಬಯಸುತ್ತೇನೆ.  ನೀವೇ ನನ್ನ ಪ್ರೀತಿಯ ಏಕೈಕ ಗುರಿಯಾಗಿರಿ.  ನಿಮ್ಮ ಎಲ್ಲ ಸೃಷ್ಟಿಗಳಲ್ಲಿ ನಾನು ನಿಮ್ಮನ್ನು ಪ್ರೀತಿಸುವಾಗ, ನಿಮ್ಮ ಇನ್ನಷ್ಟು ಸಮೀಪಕ್ಕೆ ಸೆಳೆಯಲ್ಪಡುವಂತೆಯೂ ಅವರ ಜೀವನಗಳ ಮೇಲೆ ನಿಮ್ಮ ಪರಿಪೂರ್ಣ ಕರುಣೆಯನ್ನು ಧಾರಾಳವಾಗಿ ಸುರಿಸುವಂತೆಯೂ ಆಗಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಸೆಪ್ಟೆಂಬರ್ 30 – ಯಾಜಕರೂ ಧರ್ಮಸಭೆಯ ಪಂಡಿತರೂ ಆದ ಸಂತ ಜೆರೋಮ್ ಅವರ ಸ್ಮರಣೆ

ಲಿಸಿಯುವಿನ ಸಂತ ತೆರೇಸಾರಿಗೆ ನವೇನಾ – ಪುಟ್ಟ ಪುಷ್ಪ
ಒಂಬತ್ತನೇ ದಿನ- ಸೆಪ್ಟೆಂಬರ್ 30

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು