ಕನ್ನಡ

ಚಿಂತನೆ 278: ದೇವರ ಕರುಣೆಯ ರಹಸ್ಯಗಳಿಗೆ ಕಿಟಕಿಗಳು

ಚಿತ್ರ

ವೀಡಿಯೊ

ಯೇಸುವಿನ ಹೃದಯದಿಂದ ಕರುಣೆಯ ಕಿರಣಗಳು ಹರಿಯುತ್ತಿರುವಂತೆ ಅವರ ಚಿತ್ರವನ್ನು ಬಿಡಿಸುವಂತೆ ಸಂತ ಫೌಸ್ಟಿನಾರನ್ನು ಕೇಳಲಾಯಿತು.  ಅವರು ಹಾಗೆಯೇ ಮಾಡಿದರು. ಈ ಚಿತ್ರದ ಮೂಲಕ ಅನೇಕ ಆತ್ಮಗಳು ತಮ್ಮತ್ತ ಆಕರ್ಷಿತರಾಗುವರು ಎಂದು ಯೇಸು ಅವರಿಗೆ ಭರವಸೆ ನೀಡಿದರು.  ಯೇಸು ಮತ್ತು ಸಂತ ಫೌಸ್ಟಿನಾ ಈ ಚಿತ್ರಕ್ಕೆ ನೀಡಿದ ಪ್ರಾಮುಖ್ಯತೆಯ ಕುರಿತು ಯೋಚಿಸುವುದು ಆಸಕ್ತಿದಾಯಕವಾಗಿದೆ.  ನಿಜಕ್ಕೂ, ಅವರ ಗಾಯಗೊಂಡ ಹೃದಯದಿಂದ ಪ್ರಕಾಶಮಾನವಾಗಿ ಹರಿಯುವ ಕರುಣೆಯ ಕುರಿತು ಈ ಚಿತ್ರ ಬಹಳಷ್ಟನ್ನು ಹೇಳುತ್ತದೆ.  ಇದನ್ನು ಇನ್ನೂ ವ್ಯಾಪಕವಾಗಿ ಪರಿಗಣಿಸುವುದೂ ಒಳನೋಟವನ್ನು ನೀಡುತ್ತದೆ: ಯಾವುದೇ ಬಗೆಯ ಪವಿತ್ರ ಚಿತ್ರವೂ ಕರುಣೆಯ ಮೂಲವಾಗಬಲ್ಲದು.  ಇದಕ್ಕೆ ಕಾರಣವೆಂದರೆ ಪವಿತ್ರ ಕಲೆಯು ಒಂದು ಭಾಷೆಯಲ್ಲಿ ಮಾತನಾಡುತ್ತದೆ.  ಅದು ಸುವಾರ್ತೆಯ ಸಂದೇಶವನ್ನು ತಿಳಿಸುತ್ತದೆ; ಪವಿತ್ರ ಚಿತ್ರವನ್ನು ಧ್ಯಾನಿಸುವುದು, ದೇವರು ಹೊಸ ರೀತಿಯಲ್ಲಿ ಮಾತನಾಡುವುದನ್ನು ಕೇಳಲು ನಿಮ್ಮ ಹೃದಯವನ್ನು ತೆರೆಯುತ್ತದೆ (ನೋಡಿ ದಿನಚರಿ #1379).

ನಿಮ್ಮ ಮನೆಯಲ್ಲಿ ಇರುವ ಸುವಾರ್ತೆಗೆ ಸಂಬಂಧಿಸಿದ ಚಿತ್ರಗಳ ಕುರಿತು ಚಿಂತಿಸಿ.  ನಿಮ್ಮಲ್ಲಿ ಅನೇಕ ಚಿತ್ರಗಳಿವೆಯೇ ಅಥವಾ ಬಹಳ ಕಡಿಮೆ ಇವೆಯೇ?  ಸುವಾರ್ತೆಯ ಸಂದೇಶವನ್ನು ಪ್ರತಿಬಿಂಬಿಸುವ ಪವಿತ್ರ ಚಿತ್ರಗಳಿಂದ ನಿಮ್ಮ ಮನೆಯನ್ನು ತುಂಬಿಸಲು ಹಿಂಜರಿಯಬೇಡಿ.  ಜೊತೆಗೆ, ಈ ಚಿತ್ರಗಳ ಮುಂದೆ ಪ್ರಾರ್ಥನೆಯಲ್ಲಿ ಸಮಯ ಕಳೆಯುವುದೂ ಮುಖ್ಯವಾಗಿದೆ.  ಸಂತ ಫೌಸ್ಟಿನಾರನ್ನು ನಮ್ಮ ಪ್ರಭು ಬಿಡಿಸಲು ಕೇಳಿದ ದೈವಿಕ ಕರುಣೆಯ ಚಿತ್ರವನ್ನು ಹುಡುಕಲು ಇಂದು ಸ್ವಲ್ಪ ಸಮಯ ತೆಗೆದುಕೊಳ್ಳಿ.  ಅದನ್ನು ನೋಡುತ್ತಾ, ಅದು ಹೇಳುವುದನ್ನು “ಕೇಳುತ್ತಾ” ನಿಶ್ಶಬ್ದವಾಗಿ ಸಮಯ ಕಳೆಯಿರಿ.  ಈ ಚಿತ್ರದ ಮೂಲಕ ದೇವರು ನಿಮಗೆ ಏನು ಹೇಳುತ್ತಾರೆ?  ಅವರ ಗಾಯಗೊಂಡ ಹೃದಯದಿಂದ ರಕ್ತ ಮತ್ತು ನೀರಿನ ಕಿರಣಗಳು ಪ್ರಕಾಶಮಾನವಾಗಿ ಹೊರಹೊಮ್ಮುವ ಮೂಲಕ ಅವರು ಖಂಡಿತವಾಗಿಯೂ ತಮ್ಮ ಕರುಣೆಯ ಮೂಲಭೂತ ಸಂದೇಶವನ್ನು ತಿಳಿಸುತ್ತಾರೆ.  ಈ ಕಿರಣಗಳು ಭೂಮಿಯನ್ನು ಆವರಿಸಿ ಹಗಲಿರುಳೂ ನಿಮ್ಮ ಮೇಲೆ ಬೆಳಗುತ್ತವೆ.  ಆದರೆ ಈ ಚಿತ್ರದ ಮೂಲಕ ದೇವರು ನಿಮಗೆ ಇನ್ನೇನು ಹೇಳುತ್ತಾರೆ?  ಈ ಚಿತ್ರವನ್ನೂ ಇತರ ಪವಿತ್ರ ಚಿತ್ರಗಳನ್ನೂ ಪ್ರಾರ್ಥನಾಪೂರ್ವಕವಾಗಿ ನೋಡುತ್ತಾ ಸಮಯ ಕಳೆಯುವುದು, ದೇವರು ತಮ್ಮ ಪ್ರೀತಿಯ ರಹಸ್ಯಗಳ ಕುರಿತು ಮಾತನಾಡುವುದನ್ನು ಕೇಳಲು ನಿಮಗೆ ನೆರವಾಗುತ್ತದೆ. 

ಪ್ರಭುವೇ, ನಿನ್ನ ಯಾವುದೇ ಚಿತ್ರಣವು ವಾಸ್ತವಕ್ಕೆ ಹೋಲಿಸಿದರೆ ಕೇವಲ ಒಂದು ನೀರಿನ ಹನಿಯಷ್ಟೇ ಎಂದು ನನಗೆ ತಿಳಿದಿದೆ.  ಪವಿತ್ರ ಚಿತ್ರಗಳು ಪ್ರತಿನಿಧಿಸುವ ಪಾವಿತ್ರ್ಯವನ್ನು ನಾನು ಧ್ಯಾನಿಸುವಾಗ, ನನ್ನ ಪ್ರಾರ್ಥನೆಯಲ್ಲಿ ನಿನ್ನ ಪರಿಪೂರ್ಣ ಪ್ರೀತಿ ಮತ್ತು ಕರುಣೆಯ ವಾಸ್ತವದೊಳಗೆ ಸೆಳೆಯಲ್ಪಡಲು ನನಗೆ ಸಹಾಯ ಮಾಡು.  ಪ್ರಿಯ ಪ್ರಭುವೇ, ಕಲೆ ಮತ್ತು ಅನುಗ್ರಹದ ಈ ನಿಧಿಗಳ ಮೂಲಕ ನಾನು ನಿನ್ನನ್ನು ಭೇಟಿಯಾಗುವಂತಾಗಲಿ.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ಇಂದಿನ ಸಂತರು – ಸಂತ ಫೌಸ್ಟಿನಾ ಕೊವಾಲ್ಸ್ಕಾ, ಕನ್ಯೆ

ಧನ್ಯ ಫ್ರಾನ್ಸಿಸ್ ಕ್ಸೇವಿಯರ್ ಸೀಲೋಸ್, ಯಾಜಕ

ನಮ್ಮ YouTube ಚಾನೆಲ್‌ಗೆ ಚಂದಾದಾರರಾಗಿ!
ಹೊಸ ವಿಷಯಗಳು ಪ್ರಕಟವಾದಾಗ ಸೂಚನೆಗಳನ್ನು ಪಡೆಯಿರಿ.

ಅಕ್ಟೋಬರ್ ಪವಿತ್ರ ಜಪಮಾಲೆಯ ತಿಂಗಳು

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು