ಕನ್ನಡ

ಚಿಂತನೆ 166: ಕ್ರಿಸ್ತನೊಂದಿಗಿನ ನಿಮ್ಮ ಐಕ್ಯತೆಯ ಶಕ್ತಿ

ಪೋಪ್ ಲಿಯೋ ಮತ್ತು ಅಟಿಲಾ ಎಂಬ ಹೂಣ ರಚನೆ: ನಿಕ್ ಥಾಂಪ್ಸನ್, ಪರವಾನಗಿ CC BY-NC-SA 2.0

ವೀಡಿಯೊ

ನೀವು ಸರ್ವಶಕ್ತರಾಗಿರುವುದನ್ನು ಅಥವಾ ಸರ್ವಶಕ್ತನ ಆಪ್ತ ಸ್ನೇಹಿತರಾಗಿರುವುದನ್ನು ಕಲ್ಪಿಸಿಕೊಳ್ಳಿ.  ಐದನೇ ಶತಮಾನದಲ್ಲಿ ಜೀವಿಸಿದ್ದ ಪೋಪ್ ಸಂತ ಲಿಯೋ ಪ್ರಥಮರ ಕುರಿತಾದ ಒಂದು ಕಥೆಯು ದೇವರ ಶಕ್ತಿಯನ್ನು ತೋರಿಸುತ್ತದೆ.  ಅಟಿಲಾ ಎಂಬ ಹೂಣನೂ ಅವನ ಹಿಂಸಾತ್ಮಕ ಸೈನ್ಯವೂ ರೋಮ್ ನಗರವನ್ನು ಕೊಳ್ಳೆಹೊಡೆಯಲು ಮುಂದಾದರೆಂದು ಹೇಳಲಾಗುತ್ತದೆ.  ಪೋಪ್ ಸಂತ ಲಿಯೋ ಅಟಿಲಾನನ್ನು ಭೇಟಿಯಾಗಿ ಹಿಂದಿರುಗುವಂತೆ ಅವನನ್ನು “ಮನವೊಲಿಸಿದರು”.  ನಂತರ, ಏಕೆ ಹಿಂದಿರುಗಿದನೆಂದು ಅಟಿಲಾನ ಸೈನ್ಯದವರು ಕೇಳಿದಾಗ, ಪೋಪರ ಪಕ್ಕದಲ್ಲಿ ಯಾಜಕನ ವೇಷದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನನ್ನು ಕಂಡು ತಾನು ಬೆಚ್ಚಿಬಿದ್ದಿದ್ದಾಗಿ ಅಟಿಲಾ ಹೇಳಿದನು.  ಆ ವ್ಯಕ್ತಿಯು ಒರೆಯಿಂದ ಹೊರತೆಗೆದ ಕತ್ತಿಯನ್ನು ಹಿಡಿದಿದ್ದನು; ಅಟಿಲಾ ಮುಂದಕ್ಕೆ ಬಂದರೆ ಅವನನ್ನು ಹೊಡೆದು ಕೊಲ್ಲುವವನಂತೆ ವರ್ತಿಸುತ್ತಿದ್ದನು.  ಭಯದಿಂದ ಅಟಿಲಾ ಹಿಂದಿರುಗಿ ಹೊರಟುಹೋದನು. 

ಈ ಚಿಕ್ಕ ಕಥೆಯು ಎಲ್ಲ ದುಷ್ಟತನದಿಂದಲೂ ನಮ್ಮನ್ನು ರಕ್ಷಿಸುವ ದೇವರ ಶಕ್ತಿಯನ್ನು ತೋರಿಸುತ್ತದೆ.  ದೇವದೂತನು ನಿಮ್ಮ ಪಕ್ಕದಲ್ಲಿ ದೈಹಿಕ ರೂಪದಲ್ಲಿ ಕಾಣಿಸಿಕೊಳ್ಳದಿದ್ದರೂ, ನೀವು ದೇವರ ಕರುಣೆಯಲ್ಲಿ ಮುಳುಗಿದ್ದರೆ ಯಾವುದಕ್ಕೂ ಭಯಪಡಬೇಕಾಗಿಲ್ಲ ಎಂಬ ನಿಶ್ಚಯ ನಿಮಗಿರಬಹುದು.  ಸ್ವರ್ಗದ ಎಲ್ಲ ಶಕ್ತಿಗಳೂ ನಿಮ್ಮ ಪರವಾಗಿರುತ್ತವೆ.  ಪ್ರಭು ಪ್ರತಿಯೊಂದು ಕೆಡುಕಿನಿಂದಲೂ ನಿಮ್ಮನ್ನು ರಕ್ಷಿಸುವರು ಮತ್ತು ಅವರಿಗೆ ಮಹಿಮೆ ತರುವ ಎಲ್ಲವನ್ನೂ ನೆರವೇರಿಸಲು ನಿಮಗೆ ಶಕ್ತಿಯನ್ನು ನೀಡುವರು (ನೋಡಿ ದಿನಚರಿ #858).

ಇಂದು ಈ ಎರಡು ವಿಷಯಗಳ ಕುರಿತು ಚಿಂತಿಸಿ: 1) ಕ್ರಿಸ್ತನೊಂದಿಗಿನ ನಿಮ್ಮ ಐಕ್ಯತೆ; 2) ಆ ಐಕ್ಯತೆಯಿಂದ ಹರಿದುಬರುವ ಶಕ್ತಿ.  ಪ್ರಭು ನಿಮ್ಮನ್ನು ಎಲ್ಲ ಕೆಡುಕಿನಿಂದ ರಕ್ಷಿಸುವರೆಂದು ನೀವು ಭರವಸೆಯಿಡುತ್ತೀರಾ?  ನಿಮಗೆ ವಿಶ್ವಾಸವಿದ್ದು, ನೀವು ದೇವರ ಕರುಣೆಯನ್ನು ಧರಿಸಿಕೊಂಡಿರುವಾಗ ಭಯವು ನಿಷ್ಪ್ರಯೋಜಕವೆಂದು ಅರಿತಿದ್ದೀರಾ?  ಈ ಸತ್ಯದ ಕುರಿತು ಚಿಂತಿಸಿ, ನಿಮ್ಮ ಜೀವನದ ಏಕೈಕ ಸೇನಾಧಿಪತಿಯಾಗಬೇಕಾದ ಪ್ರಭುವಿಗೆ ನಿಮ್ಮನ್ನು ಇನ್ನಷ್ಟು ಪೂರ್ಣವಾಗಿ ಸಮರ್ಪಿಸಿಕೊಳ್ಳಿ.

ನನ್ನ ಪ್ರಭುವೇ, ನನ್ನ ಏಕೈಕ ಸೇನಾಧಿಪತಿಯೇ, ನನ್ನ ಜೀವನದ ವಿಷಯದಲ್ಲಿ ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.  ನನ್ನ ಇಡೀ ಅಸ್ತಿತ್ವವನ್ನು, ವಿಶೇಷವಾಗಿ ಭಯಪಡಲು ನನ್ನನ್ನು ಪ್ರೇರೇಪಿಸುವ ಎಲ್ಲವನ್ನೂ, ನಿಮಗೆ ಒಪ್ಪಿಸುತ್ತೇನೆ.  ನಿಮ್ಮ ದೈವಿಕ ಕರುಣೆಯಲ್ಲಿ ನನಗೆ ದೃಢಭರವಸೆಯನ್ನು ನೀಡಿ, ಎಲ್ಲ ವಿಷಯಗಳಲ್ಲಿಯೂ ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮನ್ನು ಅವಲಂಬಿಸಲು ನನಗೆ ಸಹಾಯಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು