ಕನ್ನಡ

ಧ್ಯಾನ 177:  ಪವಿತ್ರ ವಿಧೇಯತೆ

ಎಕ್ಸ್ ವೋಟೊ, ಕೃತಿಕಾರ: ಫಿಲಿಪ್ ದ ಶಾಂಪೇನ್

ವೀಡಿಯೊ

ದೇವರ ಚಿತ್ತದ ಬದಲು ನಮ್ಮ ಸ್ವಂತ ಇಚ್ಛೆಯಂತೆ ನಡೆಯುವುದರಿಂದ ನಮ್ಮನ್ನು ಕಾಪಾಡುವ ಅತ್ಯುತ್ತಮ ರಕ್ಷಣೆಗಳಲ್ಲಿ ಪವಿತ್ರ ವಿಧೇಯತೆಯೂ ಒಂದು.  ಸನ್ಯಾಸ ಜೀವನದಲ್ಲಿರುವವರು ಇದನ್ನು ನೇರವಾಗಿ, ಬಾಹ್ಯ ಆಚರಣೆಯ ಮೂಲಕ ಬದುಕುವ ಭಾಗ್ಯವನ್ನು ಹೊಂದಿದ್ದಾರೆ. ಈ ಬಾಹ್ಯ ಆಚರಣೆಯನ್ನು ಆಂತರಿಕವಾಗಿ ರೂಢಿಸಿಕೊಳ್ಳುವ ಮೂಲಕ ತಾವು ದೇವರ ಚಿತ್ತದಂತೆ ಬದುಕುತ್ತಿದ್ದೇವೆ ಎಂಬ ನಿಶ್ಚಯವನ್ನು ಪಡೆಯುತ್ತಾರೆ.  ಆದರೆ ವಿಧೇಯತೆಯು ಸನ್ಯಾಸ ಜೀವನದಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ ಜೀವನದಲ್ಲಿಯೂ ಇರಬೇಕು.  ವಿಧೇಯತೆಯನ್ನು ಅನೇಕ ರೀತಿಗಳಲ್ಲಿ ಅನುಸರಿಸಬಹುದು.  ಕುಟುಂಬ ಜೀವನದಲ್ಲಿ ಪ್ರೀತಿ ಮತ್ತು ಐಕ್ಯತೆಯನ್ನು ಬೆಳೆಸಲು, ಒಂದು ರೀತಿಯ ವಿಧೇಯತೆಯಿಂದ ನಮ್ಮನ್ನು ಅಧೀನಪಡಿಸಿಕೊಂಡು, ನಮ್ಮ ಇಚ್ಛೆಯನ್ನು ಇತರರ ಇಚ್ಛೆಗಳಿಗೆ ಮಣಿಸಿದಾಗ ಅದನ್ನು ಅನುಸರಿಸುತ್ತೇವೆ.  ನಮ್ಮ ಧರ್ಮಸಭೆಯ ಧ್ವನಿಗೂ ಬೋಧನೆಗೂ ನಮ್ಮ ಇಚ್ಛೆಯನ್ನು ಮಣಿಸಿದಾಗ ಅದನ್ನು ಗಾಢವಾದ ರೀತಿಯಲ್ಲಿ ಅನುಸರಿಸುತ್ತೇವೆ.  ಪ್ರಭು ತಮ್ಮ ಧರ್ಮಸಭೆಯ ಮೂಲಕ ಹೇಳುವುದಕ್ಕೆ ಪವಿತ್ರ ವಿಧೇಯತೆಯಿಂದ ಬದುಕಿದರೆ ನಾವು ಎಂದಿಗೂ ತಪ್ಪು ದಾರಿಯಲ್ಲಿ ಹೋಗುವುದಿಲ್ಲ.  ನಾವು ಈ ವಿಧೇಯತೆಯಲ್ಲಿ ಬದುಕುವಾಗ ದೇವರ ಚಿತ್ತವು ಹೊರಗಿನಿಂದ ನಮ್ಮ ಮೇಲೆ ಹೇರಲ್ಪಡುವುದಿಲ್ಲ; ಬದಲಾಗಿ, ಮೊದಲು ನಮ್ಮ ಹೃದಯದಲ್ಲಿ ಅವರು ಮಾತನಾಡುವುದನ್ನು ಕೇಳುತ್ತೇವೆ; ಬಳಿಕ ಅದು ಬಾಹ್ಯವಾಗಿ ದೃಢೀಕರಿಸಲ್ಪಡುತ್ತದೆ (ನೋಡಿ ದಿನಚರಿ #932-933).

ಇನ್ನೊಬ್ಬರ ಇಚ್ಛೆಗೆ ಮಣಿಯುವಂತೆ ದೇವರು ನಿಮ್ಮನ್ನು ಮೃದುವಾಗಿ, ಸೂಕ್ಷ್ಮವಾಗಿ ಕರೆಯುವುದನ್ನು ನೀವು ಕೇಳುತ್ತೀರಾ?  ದೇವರ ಚಿತ್ತಕ್ಕೆ ವಿರುದ್ಧವಾದವುಗಳಿಗೆ ನೀವು ಮಣಿಯಬಾರದು. ಆದರೆ ನಿಮ್ಮ ಸ್ವಾರ್ಥವನ್ನು ತ್ಯಜಿಸಿ, ಇನ್ನೊಬ್ಬರ ಇಚ್ಛೆಯನ್ನು “ವಿಧೇಯತೆಯಿಂದ” ಸ್ವೀಕರಿಸಲು ಪ್ರತಿದಿನ ಅನೇಕ ಅವಕಾಶಗಳಿವೆ.  ದೇವರು ತಮ್ಮ ಧರ್ಮಸಭೆಯ ಮೂಲಕ ತಿಳಿಸುವ ಚಿತ್ತದ ವಿಷಯದಲ್ಲಿ ನೀವು ಯಾವಾಗಲೂ ಹೀಗೆ ಮಾಡಬಲ್ಲಿರಾದರೆ, ಕರುಣೆಯ ದ್ವಾರಗಳು ತೆರೆಯುವುದನ್ನು ಕಾಣುವಿರಿ; ನಿಮ್ಮ ವಿನಮ್ರ ವಿಧೇಯತೆಯು ನಿಮ್ಮನ್ನು ಮಹಾನ್ ಪವಿತ್ರತೆಗೆ ಕೊಂಡೊಯ್ಯುವುದು.

ಪ್ರಭುವೇ, ನನ್ನ ಸ್ವಂತ ಇಚ್ಛೆಯನ್ನು ಬಿಟ್ಟು ಇನ್ನೊಬ್ಬರ ಇಚ್ಛೆಯನ್ನು ಸ್ವೀಕರಿಸುವುದು ಕೆಲವೊಮ್ಮೆ ಬಹಳ ಕಷ್ಟವಾಗುತ್ತದೆ.  ಈ ಸಣ್ಣ ಕಾರ್ಯಗಳನ್ನು ನಿಜವಾದ ಪ್ರೀತಿಯ ಮತ್ತು ನಿಮಗೆ ಸಲ್ಲಿಸುವ ಪವಿತ್ರ ವಿಧೇಯತೆಯ ಕಾರ್ಯಗಳಾಗಿ ಕಾಣಲು ನನಗೆ ಸಹಾಯಮಾಡಿ.  ನಾನು ಪವಿತ್ರ ವಿಧೇಯತೆಯಿಂದ ನಡೆದುಕೊಳ್ಳುವಾಗ, ವಿಶೇಷವಾಗಿ ಅದಕ್ಕಾಗಿ ಮಹಾ ತ್ಯಾಗವನ್ನು ಮಾಡಬೇಕಾದಾಗ, ನನ್ನ ಇಚ್ಛೆಯನ್ನು ನಿಮ್ಮ ಚಿತ್ತಕ್ಕೆ ಅನುಗುಣವಾಗಿ ರೂಪಿಸಲು ನಿಮಗೆ ಅವಕಾಶ ನೀಡುವಂತಾಗಲಿ.  ನಿಮ್ಮ ಧರ್ಮಸಭೆಯ ಮೂಲಕ ಪ್ರಕಟವಾಗುವ ನಿಮ್ಮ ಚಿತ್ತವನ್ನೂ ನಾನು ಆರಿಸಿಕೊಳ್ಳುತ್ತೇನೆ; ನನ್ನ ಸ್ವಂತ ವಿಚಾರಗಳಿಗಿಂತ ಆ ಪ್ರಕಟಿತ ಚಿತ್ತಕ್ಕೇ ಯಾವಾಗಲೂ ಮಣಿಯುತ್ತೇನೆ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಜೂನ್ 26 – ಸಂತ ಹೋಸೆಮಾರಿಯಾ ಎಸ್ಕ್ರಿವಾ, ಯಾಜಕ–ಐಚ್ಛಿಕ ಸ್ಮರಣೆ
(ವಿವಿಧ ಸಭಾ ಪ್ರಾಂತ್ಯಗಳಲ್ಲಿ)

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು