ಕನ್ನಡ

ಚಿಂತನೆ 198: ನಿಜವಾದ ಸಹಾನುಭೂತಿಯ ಕರುಣೆ

ಚಿತ್ರ ರಚನೆ: Leroy Skalstad ಮೂಲ: Pixabay

ವೀಡಿಯೊ

ನಿಜವಾದ ಹೃತ್ಪೂರ್ವಕ ಸಹಾನುಭೂತಿಯ ಕೊರತೆಯು ಒಂದು ರೀತಿಯ ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಸ್ವಸ್ಥತೆಯ ಸ್ಪಷ್ಟ ಲಕ್ಷಣವಾಗಿದೆ.  ಇದನ್ನು ಹೇಳುತ್ತಿರುವುದು, ಇದಕ್ಕೆ ವಿರುದ್ಧವಾದುದೂ ಸತ್ಯವಾಗಿರುವುದರಿಂದಲೇ.  ನಿಜವಾದ ಹೃತ್ಪೂರ್ವಕ ಸಹಾನುಭೂತಿ ಇರುವುದು, ಒಬ್ಬ ವ್ಯಕ್ತಿಯು ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಂತನಾಗಿರುವ ಲಕ್ಷಣವಾಗಿದೆ.  ಸಹಾನುಭೂತಿ ಎಂದರೆ ಇನ್ನೊಬ್ಬರ ಸ್ಥಿತಿಯ ಬಗ್ಗೆ ನಿಮಗೆ ಅರಿವಿರುವುದು.  ಯಾರಾದರೂ ನೋವಿನಲ್ಲಿರುವಾಗ ಅಥವಾ ಸಂತೋಷದಲ್ಲಿರುವಾಗ ನೀವು ಅದನ್ನು ಗ್ರಹಿಸುತ್ತೀರಿ.  ಅಷ್ಟೇ ಅಲ್ಲದೆ, ಅವರು ಅನುಭವಿಸುವ ನೋವನ್ನು ನೀವೂ ಅನುಭವಿಸುತ್ತೀರಿ; ಅವರು ಅನುಭವಿಸುವ ಸಂತೋಷದಲ್ಲಿಯೂ ಪಾಲ್ಗೊಳ್ಳುತ್ತೀರಿ. ಇದು ದೇವರ ಕರುಣೆಯಿಂದ ಹರಿದುಬರುವ, ನಿಮ್ಮ ಹೃದಯದಲ್ಲಿನ ಕರುಣೆಯ ಕಾರ್ಯವಾಗಿದೆ.  (ನೋಡಿ ದಿನಚರಿ #1039).

ಇಂದು ನಿಮ್ಮಲ್ಲಿರುವ ಸಹಾನುಭೂತಿಯ ಬಗ್ಗೆ ಅಥವಾ ಅದರ ಕೊರತೆಯ ಬಗ್ಗೆ ಚಿಂತಿಸಿ.  ಇನ್ನೊಬ್ಬರ ಸಂತೋಷವನ್ನಾಗಲಿ ನೋವನ್ನಾಗಲಿ ನೀವು ಎದುರಿಸಿದಾಗ ನಿಮ್ಮ ಮನಸ್ಸಿನಲ್ಲಿ, ಹೃದಯದಲ್ಲಿ ಮತ್ತು ಭಾವನೆಗಳಲ್ಲಿ ಏನಾಗುತ್ತದೆ?  ಅವರ ಬಗ್ಗೆ ಕಾಳಜಿ ವಹಿಸದೆ, ಅವರೊಂದಿಗೆ ಬೆರೆಯದೆ ನೀವು ಅವರನ್ನು ದಾಟಿ ಹೋಗುತ್ತೀರಾ?  ಅಥವಾ ಅವರ ಮಾನವೀಯತೆಯನ್ನು ನೋಡಿ, ಅವರ ಘನತೆಯನ್ನು ಗುರುತಿಸಿ, ಅವರನ್ನು ಕಾಳಜಿ, ಅನುಕಂಪ ಮತ್ತು ಗೌರವದಿಂದ ಕಾಣುತ್ತೀರಾ?  ಅಂತಿಮವಾಗಿ, ಸಹಾನುಭೂತಿ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಘನತೆಗೆ ಮತ್ತು ನಮ್ಮ ಆಲೋಚನೆಗಳು, ಭಾವನೆಗಳು, ಮಾತುಗಳು ಮತ್ತು ಕ್ರಿಯೆಗಳ ಮೂಲಕ ಆ ಘನತೆಯನ್ನು ಒಪ್ಪಿಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ ಸಂಬಂಧಿಸಿದೆ.  ಇಂದು ನಿಮ್ಮಲ್ಲಿರುವ ಸಹಾನುಭೂತಿಯನ್ನು ಪ್ರಾಮಾಣಿಕವಾಗಿ ಪರಿಶೀಲಿಸಲು ಪ್ರಯತ್ನಿಸಿ. ಈ ವಿಷಯದಲ್ಲಿ ಕೊರತೆ ಇರುವುದನ್ನು ಕಂಡು ನಿಮಗೆ ಆಶ್ಚರ್ಯವಾದರೆ, ಅದರ ಕಾರಣವನ್ನು ಇನ್ನಷ್ಟು ಆಳವಾಗಿ ಪರಿಶೀಲಿಸಿ.  ಈ ಕೊರತೆಯನ್ನು ಒಪ್ಪಿಕೊಳ್ಳಲು ಹೆದರಬೇಡಿ; ಅದಕ್ಕೆ ಪರಿಹಾರವನ್ನು ಹುಡುಕಲೂ ಹೆದರಬೇಡಿ.  ಆದರೆ ಇನ್ನೊಬ್ಬರ ಬಗ್ಗೆ ಅರಿವಿನಿಂದ ತುಂಬಿದ ಅನುಕಂಪದ ಹೃದಯದ ಆಶೀರ್ವಾದ ನಿಮಗಿದೆ ಎಂದು ನೀವು ಕಂಡುಕೊಂಡರೆ, ಸಂತೋಷಿಸಿ. ಏಕೆಂದರೆ ನಿಮ್ಮ ಹೃದಯವು ದೇವರ ಕರುಣೆಯಲ್ಲಿ ಪಾಲ್ಗೊಂಡು, ಅದನ್ನು ಇತರರಿಗೂ ಹಂಚುತ್ತಿದೆ.

ಕರ್ತನೇ, ನನ್ನ ಹೃದಯವು ನಿನ್ನ ಕರುಣಾಮಯ ಹೃದಯದ ಸಾಧನವಾಗಲಿ ಎಂದು ಪ್ರಾರ್ಥಿಸುತ್ತೇನೆ.  ನಿನ್ನ ಹೃದಯದಿಂದ ಹರಿದುಬರುವ ಸಹಾನುಭೂತಿ ಮತ್ತು ಅನುಕಂಪವು ನನ್ನಲ್ಲಿ ಯಾವ ರೀತಿಯಲ್ಲಿ ಕೊರತೆಯಾಗಿದೆಯೋ, ಆ ಎಲ್ಲ ವಿಷಯಗಳಲ್ಲಿ ನನಗೆ ಸ್ವಸ್ಥತೆಯನ್ನು ದಯಪಾಲಿಸು.  ನಿನ್ನ ಕರುಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಇತರರ ಹೋರಾಟಗಳು ಮತ್ತು ಸಂತೋಷಗಳನ್ನು ಅನುಭವಿಸುವ ಆಶೀರ್ವಾದ ನನಗೆ ದೊರೆತಿರುವ ಪ್ರತಿಯೊಂದು ಸಂದರ್ಭಕ್ಕಾಗಿಯೂ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ.  ಕರ್ತನೇ, ನನ್ನ ಹೃದಯವು ನಿನ್ನ ಹೃದಯದಂತಾಗುವಂತೆ ನಿನ್ನ ಜೀವನ ಮತ್ತು ಪ್ರೀತಿಯಲ್ಲಿ ಪಾಲ್ಗೊಳ್ಳುವುದೇ ನನ್ನ ಹೃತ್ಪೂರ್ವಕ ಬಯಕೆ.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು