ನೀವು ಪ್ರಾರ್ಥಿಸುವಾಗ, ಎಂದಾದರೂ ಕುಳಿತು ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಪ್ರತಿಮೆಯನ್ನು ತದೇಕಚಿತ್ತದಿಂದ ನೋಡುತ್ತೀರಾ? ಹೊರಗಿನವರ ದೃಷ್ಟಿಯಿಂದ ನೋಡಿದರೆ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಪ್ರತಿಮೆ ಒಂದು ಒಗಟಿನಂತಿರುವ ವಾಸ್ತವ. ಇಂತಹ ಭೀಕರ ಘಟನೆಯನ್ನು ನಾವು ಏಕೆ ಎತ್ತಿಹಿಡಿದು ಗೌರವಿಸಬೇಕು? ದೇವಪುತ್ರನ ಕ್ರೂರ ಹತ್ಯೆಯು ಮೊದಲ ನೋಟಕ್ಕೆ ನಮ್ಮನ್ನು ಆಕರ್ಷಿಸದೇ ಇರಬಹುದು. ಆದರೂ, ವಿಶ್ವಾಸದಿಂದ ಅದನ್ನು ತದೇಕಚಿತ್ತದಿಂದ ನೋಡುವವರಿಗೆ ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಪ್ರತಿಮೆಯಲ್ಲಿ ಒಂದು ಶಕ್ತಿಯೂ ಆಕರ್ಷಣೆಯೂ ಇವೆ. ಏಕೆಂದರೆ ಅದು ಕೇವಲ ಭೀಕರವಾದ, ಕ್ರೂರವಾದ ಹತ್ಯೆಯಲ್ಲ; ಎಲ್ಲಕ್ಕಿಂತ ಮುಖ್ಯವಾಗಿ, ಅದು ಪಾಪ ಮತ್ತು ಮರಣದ ಮೇಲಿನ ಸಂಪೂರ್ಣ ವಿಜಯವಾಗಿದೆ. ನಮ್ಮ ಪ್ರಭುವಿನ ಶಿಲುಬೆ ಮರಣವು ಜಗತ್ತು ಕಂಡ ಅತ್ಯಂತ ಮಹಾನ್ ಪ್ರೀತಿಯ ಕ್ರಿಯೆಯಾಗಿತ್ತು. ಏಕೆಂದರೆ ಆ ಕ್ರಿಯೆಯಲ್ಲಿ, ತಮ್ಮನ್ನು ಸಂಪೂರ್ಣವಾಗಿ ಅವರಿಗೆ ಒಪ್ಪಿಸಿಕೊಟ್ಟು ಅವರತ್ತ ತಿರುಗುವವರಿಗಾಗಿ ಅವರು ಮರಣವನ್ನೂ ಪಾಪವನ್ನೂ ಶಾಶ್ವತವಾಗಿ ನಾಶಮಾಡಿದರು. ನಾವು ಬದುಕಿನಲ್ಲಿ ಪಾಲಿಸಲು ಕರೆಪಡೆದಿರುವ ಸ್ವಯಂ ಸಮರ್ಪಣೆಗೂ ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಪ್ರತಿಮೆ ಒಂದು ಸಂಕೇತವಾಗಿದೆ. ಆ ಶಿಲುಬೆಯನ್ನು ಏರಿ, ಇತರರಿಗೆ ನಮ್ಮನ್ನೇ ಅರ್ಪಿಸಿಕೊಳ್ಳುತ್ತಾ ಕ್ರಿಸ್ತನೊಂದಿಗೆ ಸಾಯಲು ನಮ್ಮಲ್ಲಿ ಪ್ರತಿಯೊಬ್ಬರೂ ಕರೆಪಡೆದಿದ್ದೇವೆ. ಏಕೆಂದರೆ ಅವರೊಂದಿಗೆ ಸಾಯುವುದರಲ್ಲಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ ಮತ್ತು ಅವರ ಪುನರುತ್ಥಾನದ ವಿಜಯದಲ್ಲಿ ಪಾಲುಗೊಳ್ಳಲು ನಮಗೆ ಸಾಧ್ಯವಾಗುತ್ತದೆ. ನಮ್ಮ ಪ್ರಭುವಿನ ಶಿಲುಬೆ ಮರಣವನ್ನು ತದೇಕಚಿತ್ತದಿಂದ ನೋಡುವುದು ನಮ್ಮನ್ನು ರೂಪಾಂತರಿಸುತ್ತದೆ; ಏಕೆಂದರೆ ಈ ನಿಸ್ವಾರ್ಥ ಪ್ರೀತಿಯ ಕ್ರಿಯೆಯಿಂದ ಗಳಿಸಿದ ಕರುಣೆಯ ಬಾಗಿಲುಗಳನ್ನು ಅದು ತೆರೆಯುತ್ತದೆ (ನೋಡಿ ದಿನಚರಿ #681).
ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಪ್ರತಿಮೆಯ ಮುಂದೆ ಪ್ರಾರ್ಥಿಸಲು ಪ್ರಯತ್ನಿಸಿ. ಮೌನವಾಗಿ ಕುಳಿತು ಅದನ್ನು ತದೇಕಚಿತ್ತದಿಂದ ನೋಡಲು ಪ್ರಯತ್ನಿಸಿ. “ತದೇಕಚಿತ್ತದಿಂದ ನೋಡುವುದು” ಎಂದರೆ ಕೇವಲ “ನೋಡುವುದಕ್ಕಿಂತ” ಹೆಚ್ಚಿನದು. ನಾವು ತದೇಕಚಿತ್ತದಿಂದ ನೋಡುವಾಗ, ನಮ್ಮ ಕಣ್ಣಿಗೆ ಕಾಣುವ ಪ್ರತಿಮೆಯಾಚೆಗೆ ನೋಡಲು ಮತ್ತು ಯೇಸುವನ್ನು ಆ ಕ್ಷಣದವರೆಗೆ ಕರೆದೊಯ್ದ ಪ್ರೀತಿಯ ಆಳವನ್ನು ಕಾಣಲು ಪ್ರಯತ್ನಿಸುತ್ತೇವೆ. ನಮ್ಮ ಪಾಪಗಳಿಂದ ನಮ್ಮನ್ನು ರಕ್ಷಿಸಲು ಮತ್ತು ಪರಿಪೂರ್ಣ ಪ್ರೀತಿಯಿಂದ ನಮ್ಮನ್ನು ಪ್ರೀತಿಸಲು ಎಲ್ಲವನ್ನೂ ಸಹಿಸಲು ಸಿದ್ಧರಾಗಿದ್ದ ಅನಂತ ಪ್ರೀತಿಯ ದೇವರನ್ನು ನಾವು ಕಾಣುತ್ತೇವೆ.
ಪ್ರಭುವೇ, ನಿನ್ನ ಪರಿಪೂರ್ಣ ಪ್ರೀತಿಯ ಕ್ರಿಯೆಯನ್ನು ತದೇಕಚಿತ್ತದಿಂದ ನೋಡಲು ಮತ್ತು ನನ್ನ ಮೇಲೂ ಇಡೀ ಜಗತ್ತಿನ ಮೇಲೂ ಕರುಣೆಯನ್ನು ಉಕ್ಕಿಹರಿಸುವ ನಿನ್ನ ಹೃದಯವನ್ನು ಕಾಣಲು ನಾನು ನಿಜವಾಗಿಯೂ ಬಯಸುತ್ತೇನೆ. ನಿನ್ನ ಬಲಿದಾನದ ಅಗಾಧವಾದ ಕೊಡುಗೆಯನ್ನು ಅರಿತುಕೊಳ್ಳಲು ಮತ್ತು ಈ ಕೊಡುಗೆಗಾಗಿ ಶಾಶ್ವತ ಕೃತಜ್ಞತೆಯಲ್ಲಿ ಜೀವಿಸಲು ನನಗೆ ನೆರವಾಗು. ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.
ಪವಿತ್ರಾತ್ಮರಿಗೆ ನೊವೇನಾ
ಪೆಂತೆಕೋಸ್ತ್ ಹಬ್ಬದ ಸಿದ್ಧತೆಗಾಗಿ ಪ್ರಾರ್ಥಿಸಲಾಗುತ್ತದೆ
ಶುಕ್ರವಾರ, ಮೇ 15 – ಶನಿವಾರ, ಮೇ 23
ಪ್ರಭುವಿನ ಸ್ವರ್ಗಾರೋಹಣದ ಕುರಿತು ಓದಿ
ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು
ಪಾಸ್ಕ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು
ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು





