ಕನ್ನಡ

ಚಿಂತನೆ 248: ಅಪರಿಮಿತ ಸಂಪನ್ಮೂಲಗಳು

ಫರಿಸಾಯನಾದ ಸೀಮೋನನ ಮನೆಯಲ್ಲಿ ಕ್ರಿಸ್ತ, ಡಿರಿಕ್ ಬೌಟ್ಸ್ ಅವರ ಚಿತ್ರ

ವೀಡಿಯೊ

ಕೇವಲ ಸ್ವಲ್ಪ ಪ್ರಮಾಣದ ಆಮ್ಲಜನಕವನ್ನು ಅಪರಿಮಿತ ಪ್ರಮಾಣದ ಶಕ್ತಿಯಾಗಿ ಪರಿವರ್ತಿಸುವ ಯಂತ್ರವನ್ನು ನಿರ್ಮಿಸುವ ಮೂಲಕ ನೀವು ಅಪರಿಮಿತ ನೈಸರ್ಗಿಕ ಸಂಪನ್ಮೂಲಗಳ ಮೂಲವನ್ನು ಕಂಡುಕೊಂಡಿದ್ದೀರಿ ಎಂದು ಊಹಿಸಿಕೊಳ್ಳಿ.  ನೀವು ಮಾಡಬೇಕಾದದ್ದು ಇಷ್ಟೇ: ನೀವು ನಿರ್ಮಿಸಿದ ಯಂತ್ರವನ್ನು ಚಾಲನೆಗೊಳಿಸುವುದು; ಆಗ ಶಕ್ತಿ ನಿರಂತರವಾಗಿ ಉತ್ಪತ್ತಿಯಾಗುತ್ತದೆ.  ಅದು ನಿಜಕ್ಕೂ ಅದ್ಭುತವಾದ ಆವಿಷ್ಕಾರವಾಗಿರುತ್ತದೆ.  ಆದರೆ ಆಧ್ಯಾತ್ಮಿಕ ಮಟ್ಟದಲ್ಲಿ ಇಂತಹದ್ದೊಂದು ನಿಜವಾಗಿಯೂ ಇದೆ.  ಅದು ಕಾರ್ಯನಿರ್ವಹಿಸಲು ಬಳಸುವ “ಆಮ್ಲಜನಕ” ನಮ್ಮ ದೈನ್ಯ ಮತ್ತು ಪಾಪ.  ಅದರ “ಜನಕ” ಯೇಸುವಿನ ಹೃದಯ.  ಅದು ಉತ್ಪಾದಿಸುವ “ಶಕ್ತಿ” ದೇವರ ಅಂತ್ಯವಿಲ್ಲದ ಕರುಣೆ.  ನಾವು ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ನಮ್ಮ ಜಗತ್ತು ಈ ಅಲೌಕಿಕ ಸಂಪನ್ಮೂಲದಿಂದ ಅಪರಿಮಿತವಾಗಿ ತುಂಬಿ ತುಳುಕುವುದು.  ನಮ್ಮ ಜೀವನದ ದೈನ್ಯವನ್ನು ನಾವು ದೇವರಿಗೆ ಅರ್ಪಿಸಿದಾಗ, ಅವರು ಅದನ್ನು ಪರಿವರ್ತಿಸುತ್ತಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು.  ನಿಜಕ್ಕೂ, ಇದೇ ಅವರ ಉತ್ಕಟ ಬಯಕೆ.  ನಿಮ್ಮ ಸ್ವಂತ ಜೀವನವು ಸಮೃದ್ಧಿಯಿಂದ ತುಂಬುವಂತೆಯೂ, ನಿಮ್ಮ ಮೂಲಕ ಜಗತ್ತು ಸಮೃದ್ಧಿಯಿಂದ ತುಂಬುವಂತೆಯೂ ನಿಮ್ಮ ದೈನ್ಯವನ್ನು ತಮ್ಮ ಕರುಣೆಯಾಗಿ ಪರಿವರ್ತಿಸಲು ಅವರ ಹೃದಯ ಹಂಬಲಿಸುತ್ತದೆ.  ನಿಮ್ಮ ದೈನ್ಯ ಮತ್ತು ಪಾಪವನ್ನು ದೇವರಿಗೆ ನೀಡಿ; ಅವರು ಅದನ್ನು ನಿರಂತರವಾಗಿ ಪರಿವರ್ತಿಸಲು ಅವಕಾಶಕೊಡಿ (ನೋಡಿ ದಿನಚರಿ #1273).

ನಿಮ್ಮ ಸ್ವಂತ ದೈನ್ಯ ಮತ್ತು ಪಾಪದ ಕುರಿತು ನೀವು ಏನು ಯೋಚಿಸುತ್ತೀರಿ?  ಅವನ್ನು ಮರೆಮಾಚುತ್ತೀರಾ, ಮುಚ್ಚಿಡುತ್ತೀರಾ, ನಿರ್ಲಕ್ಷಿಸುತ್ತೀರಾ ಮತ್ತು ಅವು ಇಲ್ಲವೇ ಇಲ್ಲ ಎಂಬಂತೆ ನಟಿಸುತ್ತೀರಾ?  ಪಾಪವೂ ದೈನ್ಯವೂ ಇಲ್ಲದ ಜೀವನವನ್ನು ನಡೆಸುತ್ತಿರುವಂತೆ ತೋರಿಸಿಕೊಂಡು ಬದುಕುತ್ತೀರಾ?  ಕೆಲವರು ಹೀಗೆ ಮಾಡುತ್ತಾರೆ; ಇನ್ನು ಕೆಲವರು ಇದಕ್ಕೆ ತದ್ವಿರುದ್ಧವಾದ ಅತಿರೇಕಕ್ಕೆ ಹೋಗಿ, ಸ್ವಾನುಕಂಪದಲ್ಲಿ ಮುಳುಗಿ, ತಮ್ಮ ದೈನ್ಯವೇ ಗೌರವದ ಚಿಹ್ನೆ ಎಂಬಂತೆ ಅದನ್ನು ಎಲ್ಲರಿಗೂ ಪ್ರದರ್ಶಿಸುತ್ತಾರೆ.  ಈ ಎರಡೂ ಧೋರಣೆಗಳು ನೆರವಾಗುವುದಿಲ್ಲ.  ನೆರವಾಗುವ ಏಕೈಕ ಮಾರ್ಗವೆಂದರೆ ನಿಮ್ಮ ಪಾಪವನ್ನೂ ಎಲ್ಲ ದೈನ್ಯವನ್ನೂ ಯೇಸುವಿನ ಹೃದಯಕ್ಕೆ ಸಮರ್ಪಿಸುವುದು.  ನೀವು ಇದನ್ನು ಮಾಡಬಲ್ಲಿರಿ.  ಹೀಗೆ ಮಾಡಲು ನೀವು ನಿರ್ಧರಿಸಬೇಕಷ್ಟೆ.  ಇಂದೇ ಅದನ್ನು ಮಾಡಿ.  ಈ ಸಂಪೂರ್ಣ ಸಮರ್ಪಣೆಯನ್ನು ಮಾಡಲು ಆರಂಭಿಸಿ; ಆಗ ಎಲ್ಲವನ್ನೂ ಕರುಣೆಯಾಗಿ ಪರಿವರ್ತಿಸುವ ಅದ್ಭುತ ಶಕ್ತಿ ಯೇಸುವಿನ ಹೃದಯದಲ್ಲಿದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. 

ಓ ಯೇಸುವಿನ ಹೃದಯವೇ, ನನ್ನ ದೈನ್ಯ ಮತ್ತು ನೋವಿನೊಂದಿಗೆ ನಾನು ನಿಮ್ಮ ಬಳಿಗೆ ಓಡಿಬರುತ್ತೇನೆ; ಪ್ರಿಯ ಪ್ರಭುವೇ, ನನ್ನ ಪಾಪವನ್ನು ನಿಮಗೆ ಸಮರ್ಪಿಸುತ್ತೇನೆ.  ದಯವಿಟ್ಟು ಅದನ್ನು ನಿಮ್ಮ ಕರುಣೆಯಾಗಿ ಪರಿವರ್ತಿಸಿ; ಈ ಕೊಡುಗೆಯು ಅಂತ್ಯವಿಲ್ಲದ ಅನುಗ್ರಹದ ಮೂಲವಾಗುವಂತೆ ಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಸೆಪ್ಟೆಂಬರ್ 5 – ಕಲ್ಕತ್ತಾದ ಸಂತ ಮದರ್ ತೆರೇಸಾ, ಕನ್ಯೆ

ದೈವಿಕ ಕರುಣೆಯ ಕುರಿತು ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು